ಶಾರ್ಜಾ: ಐಸಿಸಿ ಮಹಿಳೆಯರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೀಂ ಇಂಡಿಯಾ 9 ರನ್ಗಳ ಸೋಲನುಭವಿಸಿತು.
ಆಸ್ಟ್ರೇಲಿಯಾ ನೀಡಿದ್ದ 152 ರನ್ಗಳ ಗುರಿ ಬೆನ್ನತ್ತಿದ್ದ ಭಾರತ 20 ಓವರ್ಗಳಿಗೆ 9 ವಿಕೆಟ್ ನಷ್ಟಕ್ಕೆ 142 ರನ್ಗಳಿಸಲಷ್ಟೇ ಶಕ್ತವಾಗಿ ಸೋಲೊಪ್ಪಿಕೊಂಡಿತು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ಆರಂಭಿಕ ಆಘಾತ ಅನುಭವಿಸಿತ್ತು. ಕೇವಲ 19 ರನ್ ಗಳಿಸುವಷ್ಟರಲ್ಲೇ 2 ವಿಕೆಟ್ ಕಳೆದುಕೊಂಡಿತು. ಈ ವೇಳೆ ಜವಾಬ್ದಾರಿಯುತ ಆಟವಾಡಿದ ಗ್ರೇಸ್ ಹ್ಯಾರಿಸ್ 40 ರನ್ ಗಳಿಸಿ ಚೇತರಿಕೆ ತಂದರು. ತಾಲಿಯಾ ಮೆಕ್ಗ್ರಾತ್, ಎಲ್ಲಿಸ್ ಪೆರ್ರಿ ತಲಾ 32 ರನ್ ಗಳಿಸಿ ತಂಡಕ್ಕೆ ಆಸರೆಯಾದರು. ಇದರೊಂದಿಗೆ ಆಸ್ಟ್ರೇಲಿಯಾ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 151 ರನ್ ಗಳಿಸಿತು.
ಆಸೀಸ್ ಒಡ್ಡಿದ 152 ರನ್ ಗುರಿ ಬೆನ್ನತ್ತಿದ ಟೀಂ ಇಂಡಿಯಾ 20 ಓವರ್ಗಳಿಗೆ ಕೇವಲ 142 ರನ್ ಗಳಿಸಿ ಸೋಲನುಭವಿಸಿತು. ಕ್ಯಾಪ್ಟನ್ ಹರ್ಮನ್ಪ್ರೀತ್ ಔಟಾಗದೇ ಅರ್ಧಶತಕ (54) ಬಾರಿಸಿದರು. ದೀಪ್ತಿ ಶರ್ಮಾ (29), ಶಫಾಲಿ ವರ್ಮಾ (20) ರನ್ ಗಳಿಸಿ ತಂಡಕ್ಕೆ ಆಸರೆಯಾಗಲು ಪ್ರಯತ್ನಿಸಿದರು. ಆದರೆ, ಗೆಲುವಿನ ದಡ ಸೇರಲು ಸಾಧ್ಯವಾಗಲಿಲ್ಲ.