ಬೆಂಗಳೂರು/ಬೆಳಗಾವಿ: ಜಿಎಸ್ಟಿ ವಿಚಾರದಲ್ಲಿ ಅಧಿಕಾರಿಗಳ ಕಿರುಕುಳ ಹೆಚ್ಚಾಗಿದೆ. ಕರ್ನಾಟಕ ಜ್ಯುವೆಲರಿ ಅಸೋಸಿಯೇಷನ್ ಅಧ್ಯಕ್ಷನಾಗಿ ಈ ಬಗ್ಗೆ ನಾನು ಕೂಡ ಅಧಿಕಾರಿಗಳಿಗೆ ಪತ್ರ ಬರೆದಿದ್ದೇನೆ. ಆದರೆ, ಅವರಿಂದ ಯಾವುದೇ ಉತ್ತರ ಇಲ್ಲ. ಜಿಎಸ್ಟಿ ಪ್ರಕ್ರಿಯೆ ಸರಳವಾಗಬೇಕು ಎಂದು ಡಿಜಿಟಲೀಕರಣ ಮಾಡಲಾಗಿದೆ. ಆದರೆ, ವ್ಯಾಪಾರಸ್ತರು ಆನ್ಲೈನ್ ಮೂಲಕ ಅಪ್ಲಿಕೇಶನ್ ಸಲ್ಲಿಸಿದರೆ, ಅದರ ಪ್ರತಿಕ್ರಿಯೆ ತಿಳಿಯಲು ಮತ್ತೆ ಅವರು ಅಧಿಕಾರಿಗಳನ್ನು ಭೇಟಿ ಮಾಡಬೇಕಾದ ಪರಿಸ್ಥಿತಿ ಇದೆ ಎಂದರು.
ಒಂದು ತಿಂಗಳ ಕಾಲಮಿತಿಯೊಂದಿಗೆ ಪ್ರತಿಕ್ರಿಯೆಯು ಸಹ ಆನ್ಲೈನ್ ಮೂಲಕಲೇ ದೊರೆಯುವಂತಾಗಬೇಕು. ಆಗಲೇ ಅಧಿಕಾರಿಗಳ ಕಿರುಕುಳಕ್ಕೆ, ಭ್ರಷ್ಟಾಚಾರಕ್ಕೆ ಅವಕಾಶ ಇಲ್ಲದಂತಾಗುವುದು. ಇಲ್ಲವಾದರೆ, ಅಧಿಕಾರಿಗಳು ʼನಿಮ್ಮ ಕೆಲಸ ಆಗಬೇಕು ಎಂದರೆ ಎಷ್ಟು ಹಣ ಕೊಡುತ್ತೀಯಾʼ ಎಂದು ವ್ಯಾಪಾರಸ್ತರಿಗೆ ಹಿಂಸಿಸುತ್ತಿದ್ದಾರೆ. ಈ ರೀತಿ ಆದರೆ, ಸಣ್ಣ ಪುಟ್ಟ ವ್ಯಾಪಾರಿಗಳು ಏನು ಮಾಡಬೇಕು.
ಒಂದೇ ಬಾರಿ ಪರಿಹಾರ (ಒಟಿಎಸ್) ಒಳ್ಳೆಯದೆ ಆದರೆ, ಸಮಯ ಮೀರಿದ ನಂತರ ಅದಕ್ಕೆ ವಿಧಿಸುತ್ತಿರುವ ಬಡ್ಡಿಯ ದರ ಹೆಚ್ಚಾಗಿದೆ. ಸರ್ವರ್ ಸಮಸ್ಯೆ, ತಾಂತ್ರಿಕ ದೋಷ ಹೀಗೆ ವಿವಿಧ ಕಾರಣಗಳಿಂದ ಕೊನೆಯ ಮೂರು ದಿನಗಳು ಜಿಎಸ್ಟಿ ಪಾವತಿಗೆ ಸಮಸ್ಯೆ ಉಂಟಾಗುತ್ತಿರುವುದರಿಂದ, 18% ಬಡ್ಡಿಯ ಬದಲು, ಬ್ಯಾಂಕ್ ಬಡ್ಡಿ ದರದಷ್ಟು 12% ಮಾಡಿದರೆ, ವ್ಯಾಪಾರಿಗಳಿಗೆ ಅನುಕೂಲವಾಗುತ್ತದೆ. ಈ ವಿಚಾರಗಳ ಬಗ್ಗೆ ಸಚಿವರು ಗಮನ ಹರಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಟಿ.ಎ. ಶರವಣ ಅವರು ಇಂದು ನಡೆದ ಸದನದಲ್ಲಿ ಮನವಿ ಮಾಡಿದರು.