ಡಮಾಸ್ಕಸ್, ಸಿರಿಯಾ: ಹಲವು ದಿಕ್ಕುಗಳಿಂದ ಆಕ್ರಮಣ ನಡೆಸಿರುವ ಬಂಡುಕೋರರು ಹಮಾ ನಗರದೊಳಗೆ ಪ್ರವೇಶಿಸಿವೆ ಎಂದು ಸಿರಿಯನ್ ಸೇನೆ ತಿಳಿಸಿದೆ. ಈ ಮೂಲಕ ಅಧ್ಯಕ್ಷ ಬಶರ್ ಅಲ್ ಅಸಾದ್ ಅವರಿಗೆ ತೀವ್ರ ಹಿನ್ನಡೆಯಾಗಿದ್ದು, ಬಂಡುಕೋರ ಪಡೆಗಳೊಂದಿಗೆ ತೀವ್ರ ಹೋರಾಟದ ನಂತರ ಪಶ್ಚಿಮ – ಮಧ್ಯ ಸಿರಿಯಾದ ನಗರ ಹಮಾದ ಹೊರಗೆ ತನ್ನ ಪಡೆಗಳನ್ನು ಮರು ನಿಯೋಜಿಸಿರುವುದಾಗಿ ಸೇನೆ ಹೇಳಿದೆ.
“ಹಮಾ ನಗರದ ಮೇಲೆ ವಿವಿಧ ದಿಕ್ಕುಗಳಿಂದ ಅಧಿಕ ಸಂಖ್ಯೆಯಲ್ಲಿ ಭಯೋತ್ಪಾದಕ ಸಂಘಟನೆಗಳು ಪ್ರಾರಂಭಿಸಿದ ಹಿಂಸಾತ್ಮಕ ಮತ್ತು ಸತತ ದಾಳಿಗಳನ್ನು ಹಿಮ್ಮೆಟ್ಟಿಸಲು ನಮ್ಮ ಸಶಸ್ತ್ರ ಪಡೆಗಳು ಹೋರಾಟ ನಡೆಸುತ್ತಿವೆ” ಎಂದು ಸೇನೆ ಮತ್ತು ಸಶಸ್ತ್ರ ಪಡೆಗಳ ಸಿರಿಯನ್ ಜನರಲ್ ಕಮಾಂಡ್ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಹಮಾದಿಂದ ಸರ್ಕಾರಿ ಮಿಲಿಟರಿ ಹಿಂದೆ ಸರಿದ ನಂತರ ಎರಡನೇ ಪ್ರಮುಖ ನಗರ ಹಮಾ ಮೇಲೆ ಸಂಪೂರ್ಣ ನಿಯಂತ್ರಣ ಸಾಧಿಸಿರುವುದಾಗಿ ಸಿರಿಯನ್ ಬಂಡುಕೋರರು ಹೇಳಿದ್ದಾರೆ. ಹಮಾದಲ್ಲಿ ವಿಜಯ ದಾಖಲಿಸಲಾಗಿದ್ದು, ಯಾರ ಮೇಲೆಯೂ ಸೇಡಿನ ಕ್ರಮ ತೆಗೆದುಕೊಳ್ಳುವುದಿಲ್ಲ ಎಂದು ಇಸ್ಲಾಮಿಕ್ ಉಗ್ರಗಾಮಿ ಗುಂಪು ಹಯಾತ್ ತಹ್ರಿರ್ ಅಲ್–ಶಾಮ್ (ಎಚ್ಟಿಎಸ್) ನಾಯಕ ಅಬು ಮೊಹಮ್ಮದ್ ಅಲ್–ಜವ್ಲಾನಿ ಹೇಳಿದ್ದಾರೆ.
ಸುಮಾರು 10 ಲಕ್ಷದಷ್ಟು ಜನಸಂಖ್ಯೆ ಹೊಂದಿರುವ ಹಮಾ ಅಲೆಪ್ಪೊದಿಂದ ದಕ್ಷಿಣಕ್ಕೆ 110 ಕಿ.ಮೀ (70 ಮೈಲಿ) ದೂರದಲ್ಲಿದೆ. ಕಳೆದ ವಾರ ಬಂಡುಕೋರರು ದೇಶದ ವಾಯುವ್ಯದಲ್ಲಿ ದಿಢೀರ್ ದಾಳಿ ಆರಂಭಿಸಿ ಅಲೆಪ್ಪೊವನ್ನು ವಶಪಡಿಸಿಕೊಂಡಿದ್ದರು.