ಯಾದಗಿರಿ:- ಅನುಮಾನಾಸ್ಪದವಾಗಿ PSI ಪರಶುರಾಮ್ ಸಾವು ಕೇಸ್ ಗೆ ಸಂಬಧಪಟ್ಟಂತೆ CID ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದಾರೆ. ಹೀಗಾಗಿ ಯಾದಗಿರಿಯಲ್ಲಿ ಇಂಚಿಂಚೂ ಮಾಹಿತಿ ಕಲೆ ಹಾಕ್ತಿದ್ದಾರೆ.
ಸಿಐಡಿ ಎಡಿಜಿಪಿ ಬಿ.ಕೆ.ಸಿಂಗ್ ನೇತೃತ್ವದ ತಂಡ ಯಾದಗಿರಿಗೆ ಭೇಟಿ ನೀಡಿದ್ದು, ಪರಶುರಾಮ ಸಾವಿನ ಬಗ್ಗೆ ಇಂಚಿಂಚು ಮಾಹಿತಿ ಪಡೆಯುತ್ತಿದ್ದಾರೆ. ನಗರದ ಎಸ್ಪಿ ಕಚೇರಿ ಹಿಂಭಾಗದ ಪೊಲೀಸ್ ವಸತಿ ಗೃಹದಲ್ಲಿರುವ ಪರಶುರಾಮ ಮನೆಯನ್ನು ಪರಿಶೀಲನೆ ಮಾಡಿದ್ದಾರೆ.
ಪರಶುರಾಮ ಮನೆಯ ಯಾವ ಕೊಣೆಯಲ್ಲಿ ಮೃತಪಟ್ಟಿದ್ದ ಸೇರಿ ಅಗತ್ಯ ಮಾಹಿತಿಯನ್ನು ಮಾವ ವೆಂಕಟಸ್ವಾಮಿಯಿಂದ ಪಡೆದುಕೊಂಡಿದ್ದಾರೆ. ಮನೆಯ ಎಲ್ಲಾ ಕೊಣೆ ಪರಿಶೀಲನೆ ಮಾಡಿದ್ದಾರೆ. ನಂತರ ಎಸ್ಪಿ ಕಚೇರಿಗೆ ತೆರಳಿ ಪರಿಶೀಲಿಸಿದ್ದಾರೆ. ಸಾಯುವ ಮುನ್ನ ಪರಶುರಾಮ ಯಾರನ್ನು ಭೇಟಿ ಮಾಡಿದ್ದರು ಎಂಬ ಹಲವು ವಿಚಾರಗಳ ಬಗ್ಗೆ ಸಿಐಡಿ ತನಿಖಾಧಿಕಾರಿಗಳು ಹಾಗೂ ಯಾದಗಿರಿ ಪೊಲೀಸ್ ಅಧಿಕಾರಿಗಳಿಂದ ಎಡಿಜಿಪಿ ಅಗತ್ಯ ಮಾಹಿತಿ ಕಲೆ ಹಾಕಿದ್ದಾರೆ.
ಬಳಿಕ ಮಾಧ್ಯಮದರೊಂದಿಗೆ ಮಾತನಾಡಿದ ಪರಶುರಾಮ ಮಾವ ವೆಂಕಟಸ್ವಾಮಿ, ಬೆಳಗ್ಗೆ ಸಿಐಡಿ ಅಧಿಕಾರಿಗಳು ಫೋನ್ ಮಾಡಿ ಬರಲು ಹೇಳಿದ್ದರು. ಅವರು ಏನು ಕೇಳಿದ್ದಾರೆ ಎಲ್ಲಾ ಹೇಳಿದ್ದೇನೆ ಎಂದಿದ್ದಾರೆ.
ಇತ್ತೀಚೆಗೆ ಯಾದಗಿರಿ ನಗರದ ಲಾಲ್ ಬಹದ್ದೂರ ಶಾಸ್ತ್ರಿ ವೃತ್ತದ ಬಳಿ ಇರುವ ಶಾಸಕ ಚೆನ್ನಾರೆಡ್ಡಿ ಪಾಟೀಲ್ ಕಚೇರಿಗೆ ಸಿಐಡಿ ಡಿವೈಎಸ್ಪಿ ಪುನೀತ್ ನೇತೃತ್ವದ ತನಿಖಾ ತಂಡ ಭೇಟಿ ನೀಡಿ ಇಡೀ ಕಚೇರಿಯನ್ನು ಪರಿಶೀಲನೆ ಮಾಡಿದ್ದರು.