ಹಾಸನ: ಶೆಡ್ ವೊಂದರಲ್ಲಿ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ ನಂತರ ಆಕೆಯ ತಲೆ ಮೇಲೆ ಸಿಮೆಂಟ್ ಇಟ್ಟಿಗೆ ಎತ್ತಿಹಾಕಿ ಬರ್ಬರ ಹತ್ಯೆ ಮಾಡಿರುವ ಘಟನೆ ನಗರದ ರಾಜಘಟ್ಟ ಸಮೀಪ ರೈಲ್ವೆ ನಿಲ್ದಾಣ ಬಳಿಯ ನಿರ್ಮಾಣ ಹಂತದ ಕಟ್ಟಡದಲ್ಲಿ ನಡೆದಿದೆ.
ಗುರುವಾರದ ಮುಂಜಾನೆ ಘಟನೆ ನಡೆದಿರುವ ಸಾಧ್ಯತೆ ಹೆಚ್ಚಾಗಿದ್ದು, ಹೊಸದಾಗಿ ನಿರ್ಮಾಣವಾಗುತ್ತಿರೋ ರೈಲ್ವೆ ಇಲಾಖೆ ಕಟ್ಟಡದೊಳಗೆ 37-40 ವರ್ಷದ ಮಹಿಳೆಯ ಮೇಲೆ ಅತ್ಯಾಚಾರ ಮಾಡಿ ಕೊಲೆ ಮಾಡಲಾಗಿದೆ ಎಂದು ಅನುಮಾನಿಸಲಾಗಿದೆ. ನಿರ್ಜನ ಪ್ರದೇಶದಲ್ಲಿ ಘಟನೆ ನಡೆದಿದ್ದು, ಸಂತ್ರಸ್ತೆಯ ಶವ ನಗ್ನಾವಸ್ಥೆಯಲ್ಲಿ ಪತ್ತೆಯಾಗಿದೆ. ಮಹಿಳೆ ತಲೆಯ ಮೇಲೆ ಕಲ್ಲುಎತ್ತಿ ಹಾಕಿ ಕೊಲೆ ಮಾಡಲಾಗಿದೆ.
ರೈಲ್ವೆ ಕೂಲಿ ಕಾರ್ಮಿಕರು ಬೆಳಗ್ಗೆ ನಿರ್ಜನ ಪ್ರದೇಶದಲ್ಲಿ ಮಹಿಳೆಯ ಶವ ಬಿದ್ದಿರುವುದನ್ನು ನೋಡಿ ರೈಲ್ವೆ ಪೊಲೀಸರಿಗೆ ಮಾಹಿತಿ ನೀಡಿದ್ದು, ವಿಷಯ ತಿಳಿದ ರೈಲ್ವೇ ಪೊಲೀಸರು ಸ್ಥಳಕ್ಕೆ ಆಗಮಿಸಿ ಸ್ಥಳ ಪರಿಶೀಲನೆ ನಡೆಸಿದರು. ಹಾಸನ ಬಡಾವಣೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ರೈಲ್ವೆ ಎಸ್ಪಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ಬಗ್ಗೆ ಮಾತನಾಡಿದ ರೈಲ್ವೆ ಇಲಾಖೆಯ ಎಸ್.ಪಿ. ಸೌಮ್ಯಲತಾ ಮಾಧ್ಯಮದೊಂದಿಗೆ ಮಾತನಾಡಿ, ಕೆಲಸ ಮಾಡುವ ಕಾರ್ಮಿಕರು ಮೃತ ದೇಹ ಪತ್ತೆಯಾಗಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಮಹಿಳೆಯ ಮುಖವನ್ನು ಕಲ್ಲಿನಿಂದ ಜಜ್ಜಿ ಕೊಂದಿರುವ ಬಗ್ಗೆ ಮೇಲ್ನೋಟಕ್ಕೆ ಕಂಡು ಬಂದಿದೆ . ಮೃತಪಟ್ಟಿರುವ ಮಹಿಳೆ ಅಪರಿಚಿತರಾಗಿದ್ದು, ಆರೋಪಿಗಳು ಯಾರು ಎಂಬುದರ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ, ಈಗಾಗಲೇ ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದು, ಅತಿ ಶೀಘ್ರವಾಗಿ ಆರೋಪಿಗಳನ್ನು ಬಂಧಿಸಲಾಗುವುದು ಎಂದು ವಿಶ್ವಾಸವ್ಯಕ್ತಪಡಿಸಿದರು.