ಬಾಲಿವುಡ್ ನಟ ಶುಶಾಂತ್ ಸಿಂಗ್ ರಜಪೂರ್ ನಿಧನರಾಗಿ ನಾಲ್ಕೂವರೆ ವರ್ಷ ಕಳೆದು ಹೋಗಿದೆ. ಆದ್ರೆ ಇದುವರೆಗೂ ಸುಶಾಂತ್ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ಸುಶಾಂತ್ ಸಾವಿನ ಹಳ್ಳ ಹಿಡಿಯಿತು ಎಂದು ಸಾಕಷ್ಟು ಮಂದಿ ಅಂದುಕೊಂಡಿದ್ದರು. ಈ ಪ್ರಕರಣಕ್ಕೆ ಮರುಜೀವ ಬಂದಿದ್ದು, ಫೆಬ್ರವರಿ 19ರಂದು ಬಾಂಬೆ ಹೈಕೋರ್ಟ್ ಈ ಕುರಿತು ಮತ್ತೆ ವಿಚಾರಣೆ ನಡೆಸಲಿದೆ.
ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿನ ಪ್ರಕರಣವನ್ನು ಮತ್ತೆ ಆಳವಾಗಿ ತನಿಖೆ ನಡೆಸಬೇಕು ಎಂದು ಮನವಿ ಮಾಡಿಕೊಂಡು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ. ಫೆಬ್ರವರಿ 19ಕ್ಕೆ ಅದರ ವಿಚಾರಣೆಗೆ ಸಮಯ ನಿಗದಿ ಮಾಡಲಾಗಿದೆ. ಸುಶಾಂತ್ ನಿಧನದ ಜೊತೆಗೆ ಅವರ ಮ್ಯಾನೇಜರ್ ದಿಶಾ ಸಾಲಿಯಾನ್ ಸಾವಿನ ಬಗ್ಗೆಯೂ ಸೂಕ್ತ ತನಿಖೆಗೆ ಕೋರ್ಟ್ ಆದೇಶಿಸಬೇಕು ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.
ದಿಶಾ ಸಾಲಿಯಾನ್ ಮತ್ತು ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿಗೆ ಸಂಬಂಧಿಸಿದಂತೆ ಶಿವಸೇನಾ ಎಂಎಲ್ಎ ಆದಿತ್ಯ ಠಾಕ್ರೆ ಅವರನ್ನು ಬಂಧಿಸಬೇಕು ಮತ್ತು ತನಿಖೆಗೆ ಒಳಪಡಿಸಬೇಕು ಎಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಮೂಲಕ ಮನವಿ ಮಾಡಿಕೊಳ್ಳಲಾಗಿದೆ. ಅಲ್ಲದೇ ಈತನಕ ಸಿಬಿಐ ಮಾಡಿದ ತನಿಖೆಯ ಸಮಗ್ರ ವರದಿಯನ್ನು ಕೋರ್ಟ್ಗೆ ಸಲ್ಲಿಸಬೇಕು ಎಂದು ಕೂಡ ಅರ್ಜಿಯಲ್ಲಿ ಕೇಳಲಾಗಿದೆ.
ಈ ಹಿನ್ನೆಲೆಯಲ್ಲಿ ಆದಿತ್ಯ ಠಾಕ್ರೆ ಕೂಡ ಬಾಂಬೆ ಹೈಕೋರ್ಟ್ಗೆ ಮನವಿ ಸಲ್ಲಿಸಿದ್ದಾರೆ. ಯಾವುದೇ ಆದೇಶ ಹೊರಡಿಸುವುದಕ್ಕೂ ಮುನ್ನ ತಮ್ಮ ವಾದವನ್ನು ಕೇಳಬೇಕು ಎಂದು ಅವರು ಮನವಿ ಮಾಡಿದ್ದಾರೆ. ಸುಶಾಂತ್ ಸಿಂಗ್ ರಜಪೂತ್ ಅವರ ನಿಧನಕ್ಕೆ ಸಂಬಂಧಿಸಿದಂತೆ ಈಗಾಗಲೇ ತನಿಖೆ ಆಗಿರುವುದರಿಂದ ಈಗ ಮತ್ತೆ ತನಿಖೆಗೆ ಒತ್ತಾಯಿಸಿ ಅರ್ಜಿ ಸಲ್ಲಿಸಿರುವುದು ಸೂಕ್ತವಲ್ಲ ಎಂದು ಆದಿತ್ಯ ಠಾಕ್ರೆ ಮನವಿಯಲ್ಲಿ ತಿಳಿಸಿದ್ದಾರೆ.