ಭಾರತ ತಂಡಕ್ಕೆ ಮತ್ತೊಬ್ಬ ಆಟಗಾರನ ಗಾಯದ ಸಮಸ್ಯೆಯಿಂದ ದೊಡ್ಡ ಹೊಡೆತ ಬಿದ್ದಿದೆ. ದಕ್ಷಿಣ ಆಫ್ರಿಕಾ ವಿರುದ್ಧದ 3ನೇ ಟಿ20 ಪಂದ್ಯದ ವೇಳೆ ಪಾದದ ಗಾಯಕ್ಕೆ ತುತ್ತಾಗಿದ್ದ ಹಂಗಾಮಿ ನಾಯಕ ಸೂರ್ಯಕುಮಾರ್ ಯಾದವ್ 7 ವಾರಗಳ ಕಾಲ ವಿಶ್ರಾಂತಿ ಪಡೆಯಲಿದ್ದು, ಅಫಘಾನಿಸ್ತಾನ ವಿರುದ್ಧದ 3 ಪಂದ್ಯಗಳ ಟಿ20-ಐ ಸರಣಿಯಿಂದ ಹೊರಗುಳಿಯಲಿದ್ದಾರೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
ಟಿ20 ನಂಬರ್ 1 ಬ್ಯಾಟರ್ ಸೂರ್ಯಕುಮಾರ್ ಯಾದವ್ ಅವರ ಪಾದದ ಮೇಲೆ ಗ್ರೇಡ್ 2 ಸ್ನಾಯು ಮುರಿತ ಉಂಟಾಗಿದ್ದು, 7 ವಾರಗಳ ವಿಶ್ರಾಂತಿ ಪಡೆಯಲಿದ್ದಾರೆ. ಭಾರತ ಮತ್ತು ದಕ್ಷಿಣ ಆಫ್ರಿಕಾದ ನಡುವಣ ಮೂರನೇ ಟಿ20 ಪಂದ್ಯದಲ್ಲಿ ಸ್ಫೋಟಕ ಶತಕ (108 ರನ್) ಸಿಡಿಸಿ ಈ ಸ್ವರೂಪದಲ್ಲಿ 4ನೇ ಶತಕ ಸಿಡಿಸಿದ ದಾಖಲೆ ಬರೆದಿದ್ದ ಸೂರ್ಯಕುಮಾರ್ ಯಾದವ್, ಕ್ಷೇತ್ರ ರಕ್ಷಣೆಯ ವೇಳೆ ಅವರ ಪಾದ ಉಳುಕಿತ್ತು.
ಈ ಹಿನ್ನೆಲೆಯಲ್ಲಿ ಸೂರ್ಯಕುಮಾರ್ ಪಾದದಲ್ಲಿ ಗಂಭೀರ ನೋವು ಕಾಣಿಸಿಕೊಂಡಿದ್ದರಿಂದ ಫಿಸಿಯೋ ನೆರವಿನಿಂದ ಅವರು ಮೈದಾನದಿಂದ ಹೊರ ನಡೆದಿದ್ದರು. ಆದರೆ ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್ ವೇಳೆಯಲ್ಲಿ ನನಗೆ ಗಂಭೀರವಾದ ಸಮಸ್ಯೆ ಇಲ್ಲ ನಾನು ಸುಲಭವಾಗಿ ನಡೆಯುತ್ತೇನೆ ಎಂದು ಸೂರ್ಯ ಹೇಳಿಕೊಂಡಿದ್ದರು. ಆದರೆ ಈಗ ಗಾಯದ ಸಮಸ್ಯೆ ಗಂಭೀರವಾಗಿದ್ದು ಫೆಬ್ರವರಿವರೆಗೂ ವಿಶ್ರಾಂತಿ ಅವಶ್ಯಕತೆ ಇದೆ. ಅಫಘಾನಿಸ್ತಾನ ವಿರುದ್ಧದ 3 ಪಂದ್ಯಗಳ ಟಿ20 ಸರಣಿಯಿಂದ ಸೂರ್ಯಕುಮಾರ್ ಯಾದವ್ ಬಹುತೇಕ ಹೊರಬಿದ್ದಿದ್ದಾರೆ.