ಬೆಂಗಳೂರು: ಮುಂದಿನ ವರ್ಷ ವೆಸ್ಟ್ ಇಂಡೀಸ್ ಹಾಗೂ ಅಮೆರಿಕ ಜಂಟಿ ಆತಿಥ್ಯದಲ್ಲಿ ಟಿ20 ವಿಶ್ವಕಪ್ ಟೂರ್ನಿ ನಡೆಯಲಿದೆ. ಇದರ ಅಂಗವಾಗಿ ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ 5 ಪಂದ್ಯಗಳ ಟಿ20-ಐ ಸರಣಿಯಲ್ಲಿ ಟೀಮ್ ಇಂಡಿಯಾ ಪ್ರಬಲ ಪೈಪೋಟಿ ನಡೆಸುತ್ತಿದ್ದು, ಸರಣಿಯ ಮೊದಲ ಪಂದ್ಯದಲ್ಲಿ 2 ವಿಕೆಟ್ ರೋಚಕ ಗೆಲುವು ಸಾಧಿಸಿ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಈ ಪಂದ್ಯದ ಗೆಲುವಿನಲ್ಲಿ ಹಂಗಾಮಿ ನಾಯಕ ಸೂರ್ಯಕುಮಾರ್ ಯಾದವ್ ಮಹತ್ತರ ಪಾತ್ರ ವಹಿಸಿದ್ದರು.
ಗುರುವಾರ (ನವೆಂಬರ್ 23) ವಿಶಾಖಪಟ್ಟಣಂನ ವಿಡಿಸಿಎ ಕ್ರೀಡಾಂಗಣದಲ್ಲಿ ನಡೆದಿದ್ದ ಮೊದಲ ಟಿ20-ಐ ಪಂದ್ಯದಲ್ಲಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ತೋರಿದ್ದ ಸೂರ್ಯಕುಮಾರ್ ಯಾದವ್, ಆಸ್ಟ್ರೇಲಿಯಾದ ಬೌಲರ್ಗಳ ವಿರುದ್ಧ ಪ್ರಾಬಲ್ಯ ಮೆರೆದು 42 ಎಸೆತಗಳಲ್ಲೇ 80 ರನ್ ಬಾರಿಸಿದ್ದರು. ಆ ಮೂಲಕ ಕಾಂಗರೂ ಪಡೆ ನೀಡಿದ್ದ 209 ರನ್ಗಳನ್ನು ಚೇಸ್ ಮಾಡಲು ತಂಡಕ್ಕೆ ನೆರವು ನೀಡಿದ್ದರು. ತಮ್ಮ ಈ ಪ್ರದರ್ಶನದಿಂದ ನಾಯಕತ್ವದ ಮೊದಲ ಪಂದ್ಯದಲ್ಲೇ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಸೂರ್ಯ ಭಾಜನರಾಗಿದ್ದರು.
ಏಕದಿನ ಮಾದರಿಯಲ್ಲಿ ಪದೇ-ಪದೆ ಬ್ಯಾಟಿಂಗ್ ವೈಫಲ್ಯ ಅನುಭವಿಸಿರುವ ಸೂರ್ಯಕುಮಾರ್ ಯಾದವ್ 2023ರ ಏಕದಿನ ವಿಶ್ವಕಪ್ ಟೂರ್ನಿಯಲ್ಲೂ ವಿಫಲರಾಗಿ ಟೀಕೆಗೆ ಗುರಿಯಾಗಿದ್ದರು. ಆದರೆ ಟಿ20 ಸ್ವರೂಪದಲ್ಲಿ ತಮ್ಮ ಸ್ಪೋಟಕ ಬ್ಯಾಟಿಂಗ್ ಮುಂದುವರಿಸಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಸಿಕ್ಸರ್ಗಳ ಶತಕ ಪೂರೈಸಿ ದಾಖಲೆ ನಿರ್ಮಿಸಿರುವ ಸೂರ್ಯ, ತಿರುವನಂತಪುರಂನಲ್ಲಿ ನಡೆಯಲಿರುವ ಪಂದ್ಯದಲ್ಲಿ ಅರ್ಧಶತಕ ಸಿಡಿಸಿ ಚುಟುಕು ಸ್ವರೂಪದಲ್ಲಿ ಸತತ 4 ಅರ್ಧಶತಕ ಗಳಿಸಿದ ಮೊದಲ ಟೀಮ್ ಇಂಡಿಯಾ ಆಟಗಾರ ಎಂಬ ದಾಖಲೆ ನಿರ್ಮಿಸಲು ಹೊರಟಿದ್ದಾರೆ.
ರೋಹಿತ್-ಕೊಹ್ಲಿ ದಾಖಲೆ ಮುರಿಯುವ ಸನಿಹದಲ್ಲಿ ಸೂರ್ಯ
2022ರಲ್ಲಿ ಸತತವಾಗಿ 3 ಅರ್ಧಶತಕ ಸಿಡಿಸಿದ್ದ ಸೂರ್ಯಕುಮಾರ್ ಯಾದವ್, 2023ರ ಆಗಸ್ಟ್ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ನಡೆದಿದ್ದ ಚುಟುಕು ಸರಣಿಯ ಕೊನೆಯ 2 ಪಂದ್ಯಗಳಲ್ಲಿ ಅರ್ಧಶತಕ ಬಾರಿಸಿದ್ದ ಟಿ20 ನಂ 1 ಬ್ಯಾಟರ್, ಆಸ್ಟ್ರೇಲಿಯಾ ವಿರುದ್ಧ ಸರಣಿಯ ಮೊದಲ ಪಂದ್ಯದಲ್ಲೇ 80 ರನ್ ಬಾರಿಸಿ ಹ್ಯಾಟ್ರಿಕ್ ಅರ್ಧಶತಕ ಸಿಡಿಸಿದ್ದಾರೆ. ಈಗ ತಿರುವನಂತಪುರಂನಲ್ಲಿ ನಡೆಯಲಿರುವ ಪಂದ್ಯದಲ್ಲಿ ಅರ್ಧಶತಕ ಗಳಿಸಿ ಸತತ 4ನೇ ಅರ್ಧಶತಕ ಬಾರಿಸಿದ ಮೊದಲ ಭಾರತೀಯ ಎಂಬ ದಾಖಲೆ ಬರೆಯಲು ಸೂರ್ಯಕುಮಾರ್ ಯಾದವ್ ಎದುರು ನೋಡುತ್ತಿದ್ದಾರೆ.