ನವದೆಹಲಿ: 2018 ರಲ್ಲಿಅಮಿತ್ ಶಾ ಅವರ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಗೆ ಸುಪ್ರೀಂ ಕೋರ್ಟ್ ತಡೆ ನೀಡಿದೆ. ಇದೇ ವೇಳೆ, ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ತಾ ಅವರ ಪೀಠವು ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿ ಗಾಂಧಿ ಸಲ್ಲಿಸಿದ ಮನವಿ ಸಂಬಂಧ ಜಾರ್ಖಂಡ್ ಸರ್ಕಾರ ಮತ್ತು ದೂರುದಾರರ ಪ್ರತಿಕ್ರಿಯೆಯನ್ನು ಕೇಳಿತು.
ಇಂದಿನ ವಿಚಾರಣೆಯ ಸಂದರ್ಭದಲ್ಲಿ, ರಾಹುಲ್ ಪರವಾಗಿ ಹಾಜರಾದ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಅವರು, ಪ್ರಕರಣದಲ್ಲಿ ಮೂರನೇ ವ್ಯಕ್ತಿಯಿಂದ ದೂರು ದಾಖಲಿಸಲಾಗಿದೆ. ಮಾನನಷ್ಟ ಅಪರಾಧದ ವಿಷಯದಲ್ಲಿ ಈ ರೀತಿ ಮೂರನೇ ವ್ಯಕ್ತಿ ದೂರು ದಾಖಲಿಸುವುದನ್ನು ಅನುಮತಿಸಲಾಗದು ಎಂದು ಗಂಭೀರವಾಗಿ ವಾದ ಮಂಡಿಸಿದರು.
“ನೀವು ಬಾಧಿತ ವ್ಯಕ್ತಿಯಲ್ಲದಿದ್ದರೆ, ನೀವು ಹೇಗೆ ಪ್ರಾಕ್ಸಿ ದೂರು ಸಲ್ಲಿಸಬಹುದು?” ಎಂದು ಸಿಂಘ್ವಿ ಪ್ರಶ್ನಿಸಿದರು. ಅಂತಿಮವಾಗಿ ನ್ಯಾಯಾಲಯವು, “ಜಾರ್ಖಂಡ್ ಸರ್ಕಾರ ಮತ್ತು ದೂರುದಾರರಿಗೆ ನೋಟಿಸ್ ನೀಡಿ. ಮುಂದಿನ ಆದೇಶದವರೆಗೆ ವಿಚಾರಣೆಯಲ್ಲಿನ ಎಲ್ಲಾ ಪ್ರಕ್ರಿಯೆಗಳು ತಡೆಹಿಡಿಯಲ್ಪಡುತ್ತವೆ” ಎಂದು ಆದೇಶಿಸಿತು.