ಸ್ಯಾಂಡಲ್ವುಡ್ನ ನಟ ಧನಂಜಯ ಡಾಕ್ಟರ್ ಧನ್ಯತಾ ಜೊತೆ ಹಸೆಮಣೆ ಏರಲಿದ್ದಾರೆ. ಈಗಾಗಲೇ ಅದ್ದೂರಿಯಾಗಿ ಮದುವೆ ಮುನ್ನ ಕಾರ್ಯಕ್ರಮಗಳು ನಡೆಯುತ್ತಿದ್ದು ಹಲವರು ಆಗಮಿಸಿ ನವ ಜೋಡಿಗೆ ಶುಭ ಹಾರೈಸುತ್ತಿದ್ದಾರೆ. ಅರಮನೆಗಳ ನಗರಿ ಮೈಸೂರು ವಸ್ತು ಸಂಗ್ರಹಾಲಯ ಮೈದಾನದಲ್ಲಿ ಇಂದು ಸಂಜೆ ಧನಂಜಯ ಹಾಗೂ ಧನ್ಯತಾ ಅವರ ಆರತಕ್ಷತೆ ಸಡಗರ ನಡೆಯಲಿದ್ದು ಇದಕ್ಕಾಗಿ ತೆಲುಗಿನ ಪುಷ್ಪ ಸಿನಿಮಾದ ನಿರ್ದೇಶಕರು ಆಗಮಿಸಿದ್ದಾರೆ.
ಡಾಲಿ ಧನಂಜಯ ಅವರು ಕೇವಲ ಕನ್ನಡ ಸಿನಿಮಾಗಳಲ್ಲಿ ಮಾತ್ರವಲ್ಲದೇ ತೆಲುಗು, ತಮಿಳು ಸಿನಿಮಾಗಳಲ್ಲೂ ಅಭಿನಯ ಮಾಡಿದ್ದಾರೆ. ಹೀಗಾಗಿ ಧನಂಜಯ್ ಮದುವೆಗೆ ಕನ್ನಡದ ಜೊತೆಗೆ ಪರಭಾಷೆಯ ಮಂದಿಯೂ ಆಗಮಿಸುವ ನಿರೀಕ್ಷೆ ಇದೆ. ಇದೀಗ ಪುಷ್ಪ ಸಿನಿಮಾ ನಿರ್ದೇಶಕ ಸುಕುಮಾರ್ ಅವರು ಮೈಸೂರಿಗೆ ಆಗಮಿಸಿದ್ದಾರೆ. ಈ ವೇಳೆ ಮದುವೆ ಬ್ಯುಸಿಯಲ್ಲಿರುವ ಧನಂಜಯ ಅವಸರದಲ್ಲೇ ನಿರ್ದೇಶಕ ಸುಕುಮಾರ್ ಅವರನ್ನು ಭೇಟಿ ಮಾಡಿದ್ದಾರೆ.
ತೆಲುಗು ನಿರ್ದೇಶಕ ಸುಕುಮಾರ್ ಅವರು ಡಾಲಿ ಧನಂಜಯ ಅವರಿಗೆ ಪುಷ್ಪ ಸಿನಿಮಾ ಭಾಗ-1 ರಲ್ಲಿ ಜಾಲಿ ರೆಡ್ಡಿ ಎನ್ನುವ ಪಾತ್ರವನ್ನು ನೀಡಿದ್ದರು. ಈ ಪಾತ್ರವನ್ನು ಧನಂಜಯ ಅವರು ಅದ್ಭುತವಾಗಿ ನಿಭಾಯಿಸಿದ್ದರು. ಭಾಗ ಒಂದರಲ್ಲಿ ಕಾಣಿಸಿಕೊಂಡಿದ್ದ ಧನಂಜಯ ಮತ್ತೆ ಭಾಗ- 3ರಲ್ಲಿ ಮತ್ತೆ ಆರ್ಭಟಿಸುವ ಸಾಧ್ಯತೆ ಇದೆ.
ಮೈಸೂರಿನಲ್ಲಿ ನಡೆಯುತ್ತಿರುವ ಧನಂಜಯ ಹಾಗೂ ಧನ್ಯತಾ ಆರತಕ್ಷತೆ ಕಾರ್ಯಕ್ರಮಕ್ಕೆ ಕರ್ನಾಟಕದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಆಗಮಿಸಲಿದ್ದಾರೆ. ಇಂದು ಸಂಜೆ 6 ಗಂಟೆಯಿಂದಲೇ ರಿಸೆಪ್ಷನ್ ಸಮಾರಂಭ ನಡೆಯುತ್ತಿದ್ದು ಸಮಾರಂಭಕ್ಕೆ ಗೆಹ್ಲೋಟ್ ಅವರು ಆಗಮಿಸಿ ನವ ಜೋಡಿಗಳಿಗೆ ಶುಭ ಹಾರೈಸಲಿದ್ದಾರೆ.