ಬಾಲಿವುಡ್ನ ಖ್ಯಾತ ನಟಿ ಜಾಕ್ವೆಲಿನ್ ಫಾರ್ನಾಂಡಿಸ್ ಸುಕೇಶ್ ಗೆಳೆತನದ ಕಾರಣಕ್ಕೆ ಸಂಕಷ್ಟಕ್ಕೆ ಸಿಲುಕೊಂಡಿದ್ದಾರೆ. ಬೆಂಗಳೂರು ಮೂಲದ ವಂಚಕ ಸುಕೇಶ್ ಚಂದ್ರಶೇಖರ್ ಜೊತೆ ಜಾಕ್ವೆಲಿನ್ ಫರ್ನಾಂಡಿಸ್ ಆಪ್ತವಾಗಿದ್ದರು. ಸುಕೇಶ್ ಕೊಟ್ಟಿದ್ದ ಐಷಾರಾಮಿ ಉಡುಗೊರೆಗಳನ್ನು ಕೂಡ ಜಾಕ್ವೆಲಿನ್ ಪಡೆದಿದ್ದರು. ಅವುಗಳಿಗೆ ಸಂಬಂಧಿಸಿದಂತೆ ಚಾರ್ಜ್ಶೀಟ್ ಸಲ್ಲಿಕೆ ಮಾಡಲಾಗಿದ್ದು, ಅದನ್ನು ಪ್ರಶ್ನಿಸಿ ನಟಿ ದೆಹಲಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದು ಅದರ ವಿಚಾರಣೆ ನಡೆದಿದೆ.
ತಮ್ಮ ವಿರುದ್ಧ ಸಲ್ಲಿಕೆ ಆಗಿರುವ ಚಾರ್ಜ್ಶೀಟ್ ರದ್ದು ಮಾಡಬೇಕು ಎಂಬುದು ಜಾಕ್ವೆಲಿನ್ ಫರ್ನಾಂಡಿಸ್ ಅವರ ಮನವಿ. ಇದಕ್ಕೆ ಸಂಬಂಧಿಸಿದಂತೆ ಅವರ ವಾದ ಏನು ಎಂಬುದನ್ನು ವಕೀಲರು ತಿಳಿಸಿದ್ದಾರೆ. ಅಂದಾಜು 200 ಕೋಟಿ ರೂಪಾಯಿ ಸುಲಿಗೆ ಮತ್ತು ವಂಚನೆ ಕೇಸ್ನಲ್ಲಿ ಸುಕೇಶ್ ಅಂದರ್ ಆಗಿದ್ದಾನೆ. ಆದರೆ ಆತ ವಂಚನೆಯಿಂದ ತಂದ ದುಡ್ಡಿನಲ್ಲಿ ತಮಗೆ ಗಿಫ್ಟ್ ಕೊಟ್ಟಿದ್ದ ಎಂಬ ವಿಚಾರ ತಿಳಿದಿರಲಿಲ್ಲ ಎಂದು ಜಾಕ್ವೆಲಿನ್ ಹೇಳಿದ್ದಾರೆ.
ಎಲ್ಲವೂ ಚೆನ್ನಾಗಿ ಇದ್ದಾಗ ಜಾಕ್ವೆಲಿನ್ ಫರ್ನಾಂಡಿಸ್ ಅವರು ಸುಕೇಶ್ ಚಂದ್ರಶೇಖರ್ ಜೊತೆ ಸ್ನೇಹ ಬೆಳೆಸಿದ್ದರು. ಇಬ್ಬರೂ ಆಪ್ತವಾಗಿ ಕಾಣಿಸಿಕೊಂಡ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದವು. ಇದರಿಂದಾಗಿ ನಟಿಗೆ ಮುಜುಗರ ಆಯಿತು. ಹೇಗಾದರೂ ಮಾಡಿ ಈ ಕೇಸ್ನಿಂದ ಹೊರಗೆ ಬರಬೇಕು ಎಂದು ಜಾಕ್ವೆಲಿನ್ ಫರ್ನಾಂಡಿಸ್ ಪ್ರಯತ್ನ ಮಾಡುತ್ತಿದ್ದಾರೆ.