ಹುಬ್ಬಳ್ಳಿ: ರೈತರು ಚಿಕ್ಕ ಭೂಮಿಯಲ್ಲಿಯೇ ಸಮಗ್ರ ಬೆಳೆಗಳನ್ನು ಎಲ್ಲ ಋತುಗಳಲ್ಲಿಯೂ ಬೆಳೆದು ಅಥಿರ್ಕ ಸ್ವಾವಲಂಬಿಗಳಾಗಬೇಕು. ಬಂಜರು ಭೂಮಿಯಲ್ಲಿ ಸಾವಯವ ಕೃಷಿ ಮತ್ತು ಹನಿ ನೀರಾವರಿ ಮೂಲಕ ಆದಾಯ ಗಳಿಸಬಹುದು ಎಂದು ಪ್ರಗತಿಪರ ರೈತ ಮಹಿಳೆ ಕವಿತಾ ಮಿಶ್ರಾ ಹೇಳಿದರು. ಇಲ್ಲಿಯ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯಲ್ಲಿ ರಾಷ್ಟ್ರೀಯ ರೈತ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಸಮಾರಂಭದಲ್ಲಿ ಅವರು ಮಾತನಾಡಿದರು.
ತಾವು 10 ಎಕರೆಯಲ್ಲಿ ಋತುಗಳಿಗೆ ತಕ್ಕಂತೆ ಬಹು&ಬೆಳೆ ವಿಧಾನವನ್ನು ಬಳಸಿ, ವರ್ಷವಿಡಿ ಆದಾಯ ಗಳಿಸುತ್ತಿದ್ದೇವೆ ಎಂದು ಉದಾಹರಣೆ ಸಮೇತ ಮಾಹಿತಿ ನೀಡಿದ ಅವರು, ನಂಬಿರುವ ಮನುಷ್ಯ ಕೈಬಿಡಬಹುದು. ಆದರೆ, ನಂಬಿದ ಮಣ್ಣು ಎಂದೂ ನಮ್ಮನ್ನು ಕೈಬಿಡುವುದಿಲ್ಲ ಎಂದು ಹೇಳಿದರು. ಅನಂತಪುರದ ಕೃಷ್ಣದೇವರಾಯ ಕೃಷಿ ವಿಶ್ವವಿದ್ಯಾಲಯ ಸಹಾಯಕ ಪ್ರಾಧ್ಯಾಪಕ ಡಾ. ಭಾಗಣ್ಣ ಹರಳಯ್ಯ ಅವರು ಮಾತನಾಡಿ, ಬ್ಯಾಡಗಿ ಮೆಣಸಿನಕಾಯಿಯು ಉತ್ಕ್ರಷ್ಟ ಗುಣಮಟ್ಟವನ್ನು ಹೊಂದಿದೆ. ರೈತರು ತಾವು ಬೆಳೆದ ಬೆಳೆಗಳನ್ನು ಸಂಸ್ಕರಿಸಿ ಮೌಲ್ಯವರ್ಧನೆ ಮಾಡಿದಲ್ಲಿ ಹೆಚ್ಚಿನ ಆದಾಯವನ್ನು ಗಳಿಸಬಹುದು ಎಂದರು.
ಕಿತ್ತೂರಿನ ಪ್ರಗತಿ ಪರ ರೈತ ಮಹಿಳೆ ಲತಾ ಸಂಗಪ್ಪ ಹಳ್ಳಿಕೇರಿ ಅವರು, ತಮ್ಮ ಮೂರುವರೆ ಎಕರೆ ಭೂಮಿಯಲ್ಲಿ ಡ್ರಾಗನ್ ಫ್ರೂಟ್ ಬೆಳೆದ ಬಗೆಯನ್ನು ವಿವರಿಸಿದರು. ರಾಜ್ಯೋತ್ಸವ ಪ್ರಶಸ್ತಿ ಪಡೆದ ಡಿ.ಟಿ. ಪಾಟೀಲ, ಹನಮನಹಟ್ಟಿ ಕೃಷಿ ಮಹಾವಿದ್ಯಾಲಯ ಡೀನ್ ಡಾ. ಚಿದಾನಂದ ಮನಸೂರ ಇವರನ್ನು ಸನ್ಮಾನಿಸಲಾಯಿತು. ಸಂಸ್ಥೆಯ ಅಧ್ಯ ಎಸ್.ಪಿ. ಸಂಶಿಮಠ ಸ್ವಾಗತಿಸಿದರು. ಕೃಷಿ ತೋಟಗಾರಿಕೆ ಸಮಿತಿ ಚೇರ್ಮನ್ ಸಿ.ಎನ್. ಕರಿಕಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಗೌರವ ಕಾರ್ಯದರ್ಶಿ ರವೀಂದ್ರ ಬಳಿಗಾರ, ಜೊತೆ ಗೌರವ ಕಾರ್ಯದರ್ಶಿ ಮಹೇಂದ್ರ ಸಿಂಘಿ ಅವರು ಅತಿಥಿಗಳನ್ನು ಪರಿಚಯಿಸಿದರು.