ಮಳೆ ಕೊರತೆ ಸೇರಿ ಈ ಬಾರಿ ಆರಂಭದಿಂದಲೂ ಭತ್ತದ ಕೃಷಿಗೆ ಎದುರಾದ ಸಂಕಷ್ಟಗಳು ಒಂದೆರಡಲ್ಲ. ಎಲ್ಲವನ್ನೂ ದಾಟಿ ಮೇಣಸೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಭತ್ತ ಬೆಳೆಯಲಾಗಿದೆ. ಕೊಯ್ದು ಕಾಲದಲ್ಲಿ ಕಾಟಿ, ಹಂದಿ ಕಾಟ ವಿಪರೀತವಾಗಿರುವುದರಿಂದ ಫಸಲು, ಭತ್ತದ ಹುಲ್ಲು ಹಾಳಾಗುತ್ತಿದೆ.
ಕಷ್ಟುಪಟ್ಟು ಬೆಳೆದ ಭತ್ತದ ಬೆಳೆ ಕಾಡುಪ್ರಾಣಿಗಳ ಉಪಟಳದಿಂದ ಮಣ್ಣು ಪಾಲಾಗುತ್ತಿದ್ದು ರೈತರು ಬರದ ಜತೆಗೆ ಈಗ ನಷ್ಟದ ಹೊರೆ ಯನ್ನೂ ಹೊರುವಂತಾಗಿದೆ.
ಶೆಟ್ಟಿಹಳ್ಳಿ ಪ್ರದೇಶದಲ್ಲಿ ತೋಟ ಮತ್ತು ಭತ್ತದ ಗದ್ದೆಗೆ ನುಗ್ಗಿ ಬೆಳೆ, ಗಿಡವನ್ನು ನಾಶಪಡಿಸುತ್ತಿವೆ. ಅಲ್ಲದೆ ಗದ್ದೆಯಲ್ಲಿ ಎಲ್ಲೆಂದರಲ್ಲಿ ಸ್ವಚ್ಛಂದವಾಗಿ ತಿರುಗಾಡುತ್ತಿರುವುದರಿಂದ ಪೈರು ಮಣ್ಣಿನಡಿ ಸಿಲುಕಿದ್ದು ಹುಲ್ಲು ಮತ್ತು ಭತ್ತ ಎರಡು ನಷ್ಟವಾಗಿದೆ. ಚೌಗು ಪ್ರದೇಶದಲ್ಲಿ ಒಮ್ಮೆಲೆ ಸಂಚರಿಸಿದಾಗ ಹೊಂಡ ನಿರ್ಮಾಣವಾಗುತ್ತಿದೆ. ಈ ಭಾಗದಲ್ಲಿ ಇದೇ ಮೊದಲ ಬಾರಿ ಕಾಟಿಗಳ ಉಪಟಳ ಆರಂಭವಾಗಿದ್ದು ರೈತರನ್ನು ಸಂಕಷ್ಟಕ್ಕೆ ದೂಡಿದೆ.
ಭತ್ತದ ಗದ್ದೆಗಳಲ್ಲಿ ಮಾತ್ರವಲ್ಲದೆ ಕಾಟಿಗಳು ತೋಟದಲ್ಲೂ ದಾಂಧಲೆ ನಡೆಸಿವೆ. ಕಾಫಿ, ಕಾಳುಮೆಣಸು, ಬಾಳೆ, ಅಡಕೆ ಸಸಿಗೆ ಹಾನಿ ಮಾಡುತ್ತಿವೆ. ಬೇಲಿ, ಕಾಲುವೆ ಯಾವುದನ್ನು ಲೆಕ್ಕಿಸದೆ ಸ್ವಚ್ಛಂದವಾಗಿ ತಿರುಗಾಡುತ್ತಿದ್ದು, ತೋಟದಲ್ಲಿ ಕಾಟಗಳು ಸುತ್ತಾಡಿ ಕಾಫಿ ಗಿಡಗಳನ್ನು ಮುರಿದು ಹಾಕುತ್ತಿದೆ