ಕಳೆದ 11ವರ್ಷಗಳಿಂದ ಬಿಗ್ ಬಾಸ್ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಿರ್ವಹಿಸಿಕೊಂಡು ಬಂದಿರುವ ಕಿಚ್ಚ ಸುದೀಪ್ ಭಾನುವಾರದ ಸಂಚಿಕೆಯಲ್ಲಿ ಭಾವುಕರಾದರು. ಭಾನುವಾರದ ಸಂಚಿಕೆ ಸುದೀಪ್ ಅವರ ಕೊನೆಯ ಬಿಗ್ ಬಾಸ್ ಸಂಚಿಕೆಯಾಗಿದ್ದು ಈ ಸೀಸನ್ ಹಲವು ವಿಶೇಷತೆಗಳಿಗೆ ಸಾಕ್ಷಿಯಾಗಿತ್ತು. ಮಗನ ಕೊನೆ ಶೋ ನೋಡಲು ಸುದೀಪ್ ಅವರ ತಂದೆ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಬಂದಿದ್ದು ವಿಶೇಷವಾಗಿತ್ತು.
ಸುದೀಪ್ ಅವರಿಗೆ ಇದು ಕೊನೆಯ ಸೀಸನ್ ಆಗಿದ್ದರಿಂದ ಬಿಗ್ ಬಾಸ್, ಕಿಚ್ಚನ ಬಗ್ಗೆ ಗೌರವಪೂರ್ವಕ ನುಡಿಯನ್ನಾಡಿದರು. ಅಭಿಮಾನಿಗಳ ಅಭಿಮಾನದ ಚಕ್ರವರ್ತಿ ಕಿಚ್ಚ ಸುದೀಪ್ ಅವರಿಗೆ ಬಿಗ್ ಬಾಸ್ ಅಭಿನಂದನೆ ಸಲ್ಲಿಸಿದರು.
ಈ ಸೀಸನ್ ನಮ್ಮೆಲ್ಲರಿಗೂ ಮರೆಯಲಾಗದ ನೆನಪಿನ ಕಳಸ. ಇಲ್ಲಿ ಕಲಿತ ಪಾಠಗಳು ವಿಶೇಷ. ಸುದೀಪ್ ಈ ಸೀಸನ್ನ ಅಭೂತಪೂರ್ವ ಯಶಸ್ಸಿಗೆ ಕಾರಣರಾಗಿರುವ ನಿಮಗೆ ಬಿಗ್ಬಾಸ್ ತಂಡದ ವತಿಯಿಂದ ಒಂದು ಚಿಕ್ಕ ನೆನಪಿನ ಕಾಣಿಕೆಯನ್ನು ಬಿಗ್ ಬಾಸ್ ನೀಡಿತು.
ಬಿಗ್ ಬಾಸ್ ಫಿನಾಲೆ ಮಧ್ಯದಲ್ಲಿ ಎಂಟ್ರಿಯಾದ ಯೋಗರಾಜ್ ಭಟ್ ಅವರು ಸುದೀಪ್ ಅವರ ವ್ಯಕ್ತಿ ಚಿತ್ರಣ, ತಾಯಿ ವಾತ್ಸಲ್ಯ, ತಂದೆ ಪ್ರೀತಿಯ ಬಗ್ಗೆ ತಿಳಿಸಿಕೊಟ್ಟರು. ಇದು ಸುದೀಪ್ ಅವರಿಗೆ ಭಾವುಕ ಕ್ಷಣವಾಗಿತ್ತು.
ಮಗನ ಕೊನೆ ಸೀಸನ್ ನೋಡಲು ಸುದೀಪ್ ಅವರ ತಂದೆ ಎಂ.ಸಂಜೀವ್ ಅವರು ಬಿಗ್ ಬಾಸ್ ಮನೆಗೆ ಆಗಮಿಸಿದ್ದರು. ಪ್ರೇಕ್ಷಕರ ವೇದಿಕೆಯಲ್ಲಿ ಕುಳಿತಿದ್ದರು. ಅವರನ್ನು ಯೋಗರಾಜ್ ಭಟ್ ಅವರು ಪರಿಚಯಿಸಿದರು. ‘ನಿಮ್ಮ ತಂದೆ ನಮಗೆ ತುಂಬಾ ಆಪ್ತರು’ ಎಂದು ಸುದೀಪ್ ಮುಂದೆ ಹೇಳಿದರು. ‘ನೀವು ಬಂದಿದ್ದು ಫಿನಾಲೆ ಗ್ರ್ಯಾಂಡ್ಗೆ ಗ್ರ್ಯಾಂಡ್ ಆಯ್ತು’ ಎಂದು ಸುದೀಪ್ ತಂದೆಗೆ ಯೋಗರಾಜ್ ಭಟ್ ಧನ್ಯವಾದ ತಿಳಿಸಿದರು.
ಬಿಗ್ ಬಾಸ್ ನಿರೂಪಕರಾಗಿ ಸತತ 11 ಸೀಸನ್ಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಬಂದ ಸುದೀಪ್ ಅವರು ಕೊನೆ ಸೀಸನ್ನಲ್ಲಿ ಐದು ನಿಮಿಷ ಪ್ರೇಕ್ಷಕರಾದರು. ಇತ್ತೀಚೆಗೆ ವಿಧಿವಶರಾದ ಸುದೀಪ್ ಅವರ ತಾಯಿಯನ್ನು ವೇದಿಕೆಯಲ್ಲಿ ಸ್ಮರಿಸಲಾಯಿತು. ‘ಅಮ್ಮ.. ಅಮ್ಮ..’ ಹಾಡನ್ನು ಪ್ಲೇ ಮಾಡಲಾಯಿತು. ಅಗಲಿದ ತಾಯಿ ನೆನೆದು ಸುದೀಪ್ ಹನಿಗಣ್ಣಾದರು. ಫಿನಾಲೆ ಸಂಭ್ರಮದಲ್ಲಿದ್ದ ಬಿಗ್ ಬಾಸ್ ಮನೆ ಅರೆ ಕ್ಷಣ ಭಾವುಕವಾಯಿತು. ಕೊನೆಗೆ ಸುದೀಪ್ ಅವರಿಗೆ ಫ್ಯಾಮಿಲಿ ಇರುವ ಫೋಟೊ ಫ್ರೇಮ್ ಗಿಫ್ಟ್ ನೀಡಲಾಯಿತು. ವಿಶೇಷ ಕೊಡುಗೆ ನೀಡಿದ ಬಿಗ್ ಬಾಸ್ ತಂಡಕ್ಕೆ ಕಿಚ್ಚ ಕೃತಜ್ಞತೆ ಸಲ್ಲಿಸಿದರು.