ಸ್ಯಾನ್ ಫ್ರಾನ್ಸಿಸ್ಕೋ: ಕಳೆದ ಅಮೆರಿಕದ ಓಪನ್ಎಐ ಸಂಸ್ಥೆಯಲ್ಲಿ ಸಂಶೋಧಕರಾಗಿದ್ದ ಭಾರತೀಯ ಮೂಲದ ಸುಚಿರ್ ಬಾಲಾಜಿ ಅವರು ನವೆಂಬರ್ 26ರಂದು ತಾವು ನೆಲೆಸಿದ್ದ ಸ್ಯಾನ್ ಫ್ರಾನ್ಸಿಸ್ಕೊ ಅಪಾರ್ಟ್ಮೆಂಟ್ನಲ್ಲಿ ಶವವಾಗಿ ಪತ್ತೆಯಾಗಿದ್ದರು. ಇದೀಗ ಅವರ ತಾಯಿ ತನ್ನ ಮಗನ ಆತ್ಮಹತ್ಯೆ ಮಾಡಿಕೊಂಡಿಲ್ಲ ಎಂದಿದ್ದು ಎಫ್ ಬಿ ಐ ತನಿಖೆಗೆ ಆಗ್ರಹಿಸಿದ್ದಾರೆ.
ಹೆಚ್ಚು ಜನಪ್ರಿಯವಾಗಿರುವ ಕೃತಕ ಬುದ್ಧಿಮತ್ತೆ ಕಾರ್ಯಕ್ರಮವಾದ ಚಾಟ್ಜಿಪಿಟಿ ಅಭಿವೃದ್ಧಿಯಲ್ಲಿ ಅಮೆರಿಕದ ಹಕ್ಕುಸ್ವಾಮ್ಯ ಕಾನೂನನ್ನು ತಮ್ಮ ಕಂಪನಿ ಉಲ್ಲಂಘಿಸಿದೆ ಎಂದು ಓಪನ್ಎಐ ವಿರುದ್ಧ ಸುಚಿರ್ ಬಾಲಾಜಿ ಬಹಿರಂಗವಾಗಿ ಆರೋಪಿಸಿದ ಮೂರು ತಿಂಗಳ ನಂತರ ಬಾಲಾಜಿ ಶವ ಅವರು ವಾಸವಿದ್ದ ಫ್ಲ್ಯಾಟ್ ನಲ್ಲಿ ಪತ್ತೆಯಾಗಿತ್ತು.
ಸುಚಿರ್ ಬಾಲಾಜಿ ಸಾವು ಆತ್ಮಹತ್ಯೆ ಎಂದು ಹೇಳಲಾಗಿತ್ತು. ಆದರೆ ಬಾಲಾಜಿ ಅವರ ತಾಯಿ ಕೊಲೆ ಆರೋಪ ಮಾಡಿದ್ದು, ಎಫ್ ಬಿಐ ತನಿಖೆಗೆ ಒತ್ತಾಯಿಸಿದ್ದಾರೆ.
ಬಾಲಾಜಿ ಅವರ ತಾಯಿ ಪೂರ್ಣಿಮಾ ರಾವ್ ಅವರು ಈ ಸಂಬಂಧ ಆನ್ಲೈನ್ ಅಭಿಯಾನವನ್ನು ಪ್ರಾರಂಭಿಸಿದ್ದಾರೆ. ಮರಣೋತ್ತರ ಪರೀಕ್ಷೆಯಲ್ಲಿ ಸಾವಿಗೆ ಆತ್ಮಹತ್ಯೆ ಕಾರಣವೆಂದು ದೃಢೀಕರಿಸಿಲ್ಲ. ಹೀಗಾಗಿ ಈ ಕುರಿತು ಎಫ್ಬಿಐ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.
ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಪೂರ್ಣಿಮಾ ರಾಮರಾವ್ ಅವರು, ನಾವು ಈ ಕುರಿತು ತನಿಖೆಗೆ ಖಾಸಗಿ ತನಿಖಾಧಿಕಾರಿಯನ್ನು ನೇಮಿಸಿದ್ದೇವೆ ಮತ್ತು ಸಾವಿನ ಕಾರಣವನ್ನು ಪತ್ತೆ ಹಚ್ಚಲು ಎರಡನೇ ಬಾರಿಗೆ ಶವಪರೀಕ್ಷೆ ಮಾಡಿದ್ದೇವೆ. ಖಾಸಗಿ ಶವಪರೀಕ್ಷೆಯು ಪೊಲೀಸರು ಹೇಳಿದ ಕಾರಣವನ್ನು ದೃಢೀಕರಿಸುವುದಿಲ್ಲ. ಸುಚಿರ್ ಇದ್ದ ಅಪಾರ್ಟ್ಮೆಂಟ್ ನ ಬಾತ್ ರೂಂನಲ್ಲಿ ರಕ್ತದ ಕಲೆಗಳು ಇದ್ದವು. ಯಾರೋ ಅವನನ್ನು ಸ್ನಾನಗೃಹದಲ್ಲಿ ಹೊಡೆದಂತೆ ತೋರುತ್ತಿದೆ ಎಂದು ಹೇಳಿದ್ದಾರೆ.
ಪೂರ್ಣಿಮಾ ರಾಮರಾವ್ ಅವರ ಪೋಸ್ಟ್ ಗೆ ಪ್ರತಿಕ್ರಿಯಿಸಿದ ಎಲಾನ್ ಮಸ್ಕ್, ಇದು ಆತ್ಮಹತ್ಯೆಯಂತೆ ತೋರುತ್ತಿಲ್ಲ ಎಂದಿದ್ದಾರೆ.