ಎರಡನೇ ಇನ್ನಿಂಗ್ಸ್ನಲ್ಲಿ ದ್ವಿಶತಕ ಸಿಡಿಸಿದ ಯುವ ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ ತಂಡದ ಗೆಲುವಿನ ರೂವಾರಿಗಳೆನಿಸಿಕೊಂಡರು. ಇದೀಗ ಬಿಗ್ ಇನ್ನಿಂಗ್ಸ್ ಹಿಂದಿರುವ ಸೀಕ್ರೆಟ್ ರಿವೀಲ್ ಮಾಡಿದ್ದಾರೆ.
ರಾಜ್ಕೋಟ್ನಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು 434 ರನ್ಗಳ ಅಂತರದಿಂದ ಮಣಿಸಿರುವ ಟೀಂ ಇಂಡಿಯಾ (India vs England) ಸರಣಿಯಲ್ಲಿ 2-1 ಅಂತರದ ಮುನ್ನಡೆ ಕಾಯ್ದುಕೊಂಡಿದೆ. ಭಾರತದ ನೀಡಿದ 557 ರನ್ಗಳ ಟಾರ್ಗೆಟ್ ಬೆನ್ನಟ್ಟಿದ ಆಂಗ್ಲರು ಕೇವಲ 122 ರನ್ಗಳಿಗೆ ಆಲೌಟ್ ಆಗಿ ಭಾರತಕ್ಕೆ ಸುಲಭ ತುತ್ತಾದರು. ಭಾರತದ ಪರ ಮೊದಲ ಇನ್ನಿಂಗ್ಸ್ನಲ್ಲಿ ಶತಕ ಸಿಡಿಸಿದ ರೋಹಿತ್ ಶರ್ಮಾ, ರವೀಂದ್ರ ಜಡೇಜಾ ಹಾಗೂ ಎರಡನೇ ಇನ್ನಿಂಗ್ಸ್ನಲ್ಲಿ ದ್ವಿಶತಕ ಸಿಡಿಸಿದ ಯುವ ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ (Yashasvi Jaiswal) ತಂಡದ ಗೆಲುವಿನ ರೂವಾರಿಗಳೆನಿಸಿಕೊಂಡರು. ಪಂದ್ಯ ಮುಗಿದ ಬಳಿಕ ಮಾತನಾಡಿದ ಯಶಸ್ವಿ ಜೈಸ್ವಾಲ್ ಎರಡನೇ ಇನ್ನಿಂಗ್ಸ್ನಲ್ಲಿ ದ್ವಿಶತಕದ ಇನ್ನಿಂಗ್ಸ್ ಆಡಿದ ಹಿಂದಿರುವ ರಹಸ್ಯ ಏನು ಎಂಬುದನ್ನು ತೆರೆದಿಟ್ಟಿದ್ದಾರೆ.
ದ್ವಿಶತಕದ ಇನ್ನಿಂಗ್ಸ್ ಬಗ್ಗೆ ಮಾತನಾಡಿದ ಜೈಸ್ವಾಲ್, ‘ನಾನು ಸೆಟ್ ಆದ ನಂತರ ಅದನ್ನು ಬಿಗ್ ಇನ್ನಿಂಗ್ಸ್ ಆಗಿ ಪರಿವರ್ತಿಸಲು ಪ್ರಯತ್ನಿಸುತ್ತೇನೆ. ನಾನು ಸೆಟ್ ಆದ ನಂತರ ಎಲ್ಲಿಯವರೆಗೆ ಸಾಧ್ಯವೋ ಅಲ್ಲಿಯವರೆಗೆ ಆಡಲು ಪ್ರಯತ್ನಿಸುತ್ತೇನೆ. ಆದರೆ ಆರಂಭದಲ್ಲಿ ರನ್ ಗಳಿಸಲು ತುಂಬಾ ಕಷ್ಟಕರವಾಗಿತ್ತು. ಹೀಗಾಗಿ ನಾನು ತಾಳ್ಮೆಯಿಂದ ಇಡೀ ಸೆಷನ್ ಆಡಲು ನಿರ್ಧರಿಸಿದೆ. ಒಂದು ಹಂತದಲ್ಲಿ ಸೆಟ್ ಆದ ನಂತರ ನಾನು ಎಲ್ಲಿ ಶಾಟ್ಗಳನ್ನು ಆಡಬಹುದು ಮತ್ತು ಎಲ್ಲಿ ರನ್ ಗಳಿಸಬಹುದು ಎಂಬ ಬಗ್ಗೆ ಅರಿವಿತ್ತು. ಹೀಗಾಗಿ ಆರಂಭದಲ್ಲಿ ನಾನು ತಾಳ್ಮೆಯ ಆಟಕ್ಕೆ ಮುಂದಾದೆ’.
ಆದರೆ ಸ್ವಲ್ಪ ಸಮಯದ ನಂತರ ನನಗೆ ಬೆನ್ನು ನೋವು ಕಾಣಿಸಿಕೊಂಡಿತು. ಆದರೂ ನಾನು ಬ್ಯಾಟಿಂಗ್ ಮಾಡುವುದನ್ನು ಮುಂದುವರೆಸಿದೆ. ಏಕೆಂದರೆ ನನಗೆ ಅರ್ಧಕ್ಕೆ ಬ್ಯಾಟಿಂಗ್ ನಿಲ್ಲಿಸಿ ಪೆವಿಲಿಯನ್ಗೆ ಹಿಂದಿರುಗುವುದು ಇಷ್ಟವಿರಲಿಲ್ಲ. ಆದರೆ ಬೆನ್ನು ನೋವು ತುಂಬಾ ಹೆಚ್ಚಾದ ಕಾರಣ ನಾನು ಮೈದಾನ ತೊರೆಯಬೇಕಾಯಿತು. ಆ ನಂತರ ನಾಲ್ಕನೇ ದಿನದಾಟದಲ್ಲಿ ನನಗೆ ಬ್ಯಾಟಿಂಗ್ ಮಾಡುವ ಅವಕಾಶ ಸಿಕ್ಕಾಗ ಪಿಚ್ನಲ್ಲಿ ಸ್ವಲ್ಪ ಸಮಯ ಕಳೆಯಲು ತೀರ್ಮಾನಿಸಿದೆ. ಹಾಗೆಯೇ ಎಷ್ಟು ಸಾಧ್ಯವೋ ಅಷ್ಟು ದೂರ ಇನ್ನಿಂಗ್ಸ್ ತೆಗೆದುಕೊಂಡು ಹೋಗಲು ಪ್ರಯತ್ನಿಸಿದೆ. ನಾನು ಕ್ರೀಸ್ನಲ್ಲಿದ್ದರೆ ಆಟವನ್ನು ಸಾಧ್ಯವಾದಷ್ಟು ದೂರ ಕೊಂಡೊಯ್ಯುತ್ತೇನೆ ಎಂದು ನನಗೆ ತಿಳಿದಿತ್ತು. ಅಲ್ಲದೆ ಮೊದಲ ಇನ್ನಿಂಗ್ಸ್ನಲ್ಲಿ ರೋಹಿತ್ ಶರ್ಮಾ ಮತ್ತು ರವೀಂದ್ರ ಜಡೇಜಾ ಸೆಷನ್ ಬೈ ಸೆಷನ್ ಆಡಿದ ರೀತಿ ಅದ್ಭುತವಾಗಿತ್ತು. ಇವರಿಬ್ಬರ ಆಟ ನನ್ನನ್ನು ಬಿಗ್ ಇನ್ನಿಂಗ್ಸ್ ಆಡುವಂತೆ ಪ್ರೇರೇಪಿಸಿತು ಎಂದರು.