ಬಾಂಗ್ಲಾದೇಶದಲ್ಲಿ ಮತ್ತೊಮ್ಮೆ ವಿದ್ಯಾರ್ಥಿಗಳು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದು ಹಲವು ವಾಹನಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆಸ್ಪತ್ರೆಯ ಸಿಬ್ಬಂದಿಗಳ ನಿರ್ಲಕ್ಷ್ಯ ಕಾರಣಕ್ಕೆ ವಿದ್ಯಾರ್ಥಿಯೋರ್ವ ಮೃತಪಟ್ಟಿದ್ದಾನೆ ಎಂದು ಆರೋಪಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ.
ಡೆಂಗ್ಯೂಯಿಂದ ಬಳಲುತ್ತಿದ್ದ 18 ವರ್ಷದ ವಿದ್ಯಾರ್ಥಿಯೊಬ್ಬನನ್ನು ಢಾಕಾ ರಾಷ್ಟ್ರೀಯ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸೇರಿಸಲಾಗಿದ್ದು ಆತ ನವೆಂಬರ್ 18ರಂದು ಸಾವನ್ನಪ್ಪಿದ್ದ. ವಿದ್ಯಾರ್ಥಿಯ ಸಾವಿಗೆ ಆಸ್ಪತ್ರೆಯಲ್ಲಿ ನೀಡಿದ ತಪ್ಪು ಚಿಕಿತ್ಸೆ ಕಾರಣ ಎಂದು ಆತನ ಸ್ನೇಹಿತರು ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿದ್ದರು. ಆಸ್ಪತ್ರೆಯ ಸಿಬ್ಬಂದಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಕಳೆದ 3 ದಿನಗಳಿಂದ ವಿದ್ಯಾರ್ಥಿಗಳು ನಡೆಸುತ್ತಿದ್ದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ.
ಢಾಕಾದ ಶಾಹಿದ್ ಸುಹ್ರವರ್ದಿ ಸರ್ಕಾರಿ ಕಾಲೇಜಿಗೆ ನುಗ್ಗಿದ ವಿದ್ಯಾರ್ಥಿಗಳ ಗುಂಪು 6 ವಾಹನಗಳನ್ನು ಜಖಂಗೊಳಿಸಿ ದಾಂಧಲೆ ನಡೆಸಿದೆ. ಬಳಿಕ ಢಾಕಾ ವೈದ್ಯಕೀಯ ಕಾಲೇಜು ಹಾಗೂ ಇತರ ಕಾಲೇಜಿಗೆ ನುಗ್ಗಲು ವಿದ್ಯಾರ್ಥಿಗಳ ಗುಂಪು ಯತ್ನಿಸಿದಾಗ ವಿದ್ಯಾರ್ಥಿಗಳ ಎರಡು ಗುಂಪಿನ ನಡುವೆ ಘರ್ಷಣೆ ನಡೆದು 30 ಮಂದಿ ಗಾಯಗೊಂಡಿದ್ದಾರೆ. ರವಿವಾರ ಬೆಳಿಗ್ಗೆ ಸುಹ್ರವರ್ದಿ ಕಾಲೇಜಿನ ಸುತ್ತಮುತ್ತ ಇರುವ ಅಂಗಡಿಗಳನ್ನು ವಿದ್ಯಾರ್ಥಿಗಳ ಗುಂಪು ಲೂಟಿ ಮಾಡಿದ ಹಿನ್ನೆಲೆಯಲ್ಲಿ ಢಾಕಾದ ಕಾಲೇಜುಗಳು, ಹಾಸ್ಟೆಲ್ಗಳು ಹಾಗೂ ಪ್ರಾರ್ಥನಾ ಸ್ಥಳಗಳ ಬಳಿ ಸೇನೆಯನ್ನು ನಿಯೋಜಿಸಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.