ಮಂಡ್ಯ : ಮಂಡ್ಯದಲ್ಲಿ ಫುಡ್ ಫಾಯ್ಸನ್ನಿಂದಾಗಿ ವಿದ್ಯಾರ್ಥಿ ಸಾವು ಪ್ರಕರಣ ಸಂಬಂಧ ವಸತಿ ಶಾಲೆ ಆಡಳಿತ ಮಂಡಳಿ ವಿರುದ್ದ ಎಫ್ಐಆರ್ ದಾಖಲಾಗಿದೆ. ಸಚಿವ ಚಲುವರಾಯಸ್ವಾಮಿ ಅವರ ಸೂಚನೆಯ ಮೇರೆಗೆ ಪ್ರಕರಣ ದಾಖಲು ಮಾಡಲಾಗಿದೆ.
ಇಂದು ಸಚಿವ ಚಲುವರಾಯಸ್ವಾಮಿ ಮಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿ, ಮಕ್ಕಳ ಆರೋಗ್ಯ ವಿಚಾರಿಸಿದರು. ಜೊತೆಗೆ ಅಧಿಕಾರಿಗಳಿಂದ ಘಟನೆಯ ಬಗ್ಗೆ ಮಾಹಿತಿ ಪಡೆದರು. ಬಳಿಕ ಮಾತನಾಡಿರುವ ಸಚಿವರು, ಮೇಘಾಲಯದಿಂದ ಮಕ್ಕಳನ್ನ ಅಡಪ್ಟ್ ಮಾಡಿಕೊಳ್ಳಲಾಗಿದೆ. ಕಾನೂನು ವ್ಯಾಪ್ತಿಯಲ್ಲಿ ಅನುಮತಿ ಇದ್ಯಾ ಅನ್ನೋದರ ಬಗ್ಗೆ ಪರಿಶೀಲನೆ ಮಾಡಲಾಗ್ತಿದೆ. ಆ ಶಾಲೆಯಲ್ಲಿ ಮಕ್ಕಳು ಇರಲು ಯೋಗ್ಯವಾಗಿಲ್ಲ. ಸಾಕಷ್ಟು ತಪ್ಪುಗಳು ನಡೆದಿದೆ. ಶಾಲಾ ಆಡಳಿತ ಮಂಡಳಿ ವಿರುದ್ದ ಪ್ರಕರಣ ದಾಖಲು ಮಾಡುವಂತೆ ಸೂಚನೆ ನೀಡಿದ್ದೇನೆ. ಮೃತ ಮಗುವಿನ ಕುಟುಂಬಕ್ಕೆ ಮಾಹಿತಿ ನೀಡಲಾಗಿದೆ. ಸರ್ಕಾರ ಇದರ ಬಗ್ಗೆ ಸಂಪೂರ್ಣ ಮಾಹಿತಿ ಪಡೆದಿದೆ. ಮಕ್ಕಳ ಚಿಕಿತ್ಸಾ ವೆಚ್ಚವನ್ನ ನಾವೇ ಭರಿಸಲಿದ್ದೇವೆ ಎಂದರು.
ಕಲುಷಿತ ಆಹಾರ ಸೇವನೆಯಿಂದ ಓರ್ವ ವಿದ್ಯಾರ್ಥಿ ಸಾವು ; 25ಕ್ಕೂ ಅಧಿಕ ಮಕ್ಕಳು ಅಸ್ವಸ್ಥ
ಇನ್ನೂ ಈ ಬಗ್ಗೆ ಮಂಡ್ಯ ಜಿಲ್ಲಾಧಿಕಾರಿ ಪ್ರತಿಕ್ರಿಯಿಸಿದ್ದು, ವಸತಿ ಶಾಲೆ ನಡೆಸಲು ಯಾವುದೇ ಅನುಮತಿ ಪಡೆದಿಲ್ಲಾ. ಅನಧಿಕೃತವಾಗಿ ವಸತಿ ಶಾಲೆ ನಡೆಸಲಾಗ್ತಿತ್ತು. ಶಾಲಾ ಆಡಳಿತ ಮಂಡಳಿ ವಿರುದ್ದ ಕ್ರಮ ತೆಗೆದುಕೊಳ್ಳಲಿದ್ದೇವೆ. ಓರ್ವ ವಿದ್ಯಾರ್ಥಿ ಸಾವನ್ನಪ್ಪಿದ್ದಾನೆ. ಹೋಳಿ ಬಣ್ಣ ಊಟದ ಜೊತೆ ಸೇರಿತ್ತು ಎಂದು ಹೇಳಲಾಗ್ತಿದೆ. ಇದರ ಬಗ್ಗೆ ಸೂಕ್ತ ತನಿಖೆಗೆ ಸೂಚನೆ ನೀಡಿದ್ದೇನೆ ಎಂದಿದ್ದಾರೆ.