ಬೆಂಗಳೂರು:- ಪ್ರವಾಹ ಎದುರಿಸಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು CM ಸಿದ್ದರಾಮಯ್ಯ ಹೇಳಿದ್ದಾರೆ.
ರೈತರಿಗೆ ಸಮರ್ಪಕ ರಸಗೊಬ್ಬರ ವಿತರಿಸಿ: ಡಿಸಿಗಳಿಗೆ ಸಿದ್ದರಾಮಯ್ಯ ತಾಕೀತು!
ಮಳೆಗಾಲ ಆರಂಭವಾಗಿದ್ದು, ಈ ಹಿನ್ನಲೆ ಇಂದು(ಮಂಗಳವಾರ) ವಿಪತ್ತು ನಿರ್ವಹಣೆ ಬಗ್ಗೆ ಅಧಿಕಾರಿಗಳೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸೌಧದಲ್ಲಿ ಚರ್ಚೆ ಮಾಡಿದರು. ಬಳಿಕ ಮಾತನಾಡಿದ ಅವರು, ಈ ಹಿಂದೆ 177 ತಾಲೂಕುಗಳಲ್ಲಿ 1,200 ಗ್ರಾಮ ಪಂಚಾಯತಿ ವ್ಯಾಪ್ತಿಯ 2205 ಗ್ರಾಮಗಳಲ್ಲಿ ಪ್ರವಾಹಕ್ಕೆ ತುತ್ತಾಗುವ ಹಳ್ಳಿಗಳೆಂದು ಗುರುತಿಸಿದ್ದೇವೆ. ಜೊತೆಗೆ ಬಿಬಿಎಂಪಿ ವ್ಯಾಪ್ತಿಯಲ್ಲಿನ 201 ಪ್ರವಾಹ ಸ್ಥಳಗಳನ್ನು ಗುರುತಿಸಲಾಗಿದೆ. ಎಲ್ಲಿಯೂ ಸಮಸ್ಯೆಯಾಗದಂತೆ ವಿಪತ್ತು ನಿರ್ವಹಣೆ ಮಾಡುವವರು ಎಚ್ಚರವಹಿಸಿ, ಮುಂಜಾಗ್ರತಾ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರು.
ಮಂಗಳೂರು, ಉಡುಪಿ ಸೇರಿದಂತೆ ಎಲ್ಲೆಲ್ಲಿ ಪ್ರವಾಹ ಆಗಿದೆಯೋ ಅಲ್ಲಲ್ಲಿ ಪ್ರವಾಹ ಎದುರಿಸಲು ಕಟ್ಟುನಿಟ್ಟಿನ ಸೂಚನೆ ನೀಡಿದ್ದೇನೆ. ಈಗಾಗಲೇ ಮಳೆಯಿಂದ 3714 ಮನೆಗಳಿಗೆ ಹಾನಿಯಾಗಿದೆ. ಅವರಿಗೆ ಎಸ್ಡಿಆರ್ಎಫ್ ಅಡಿ ಪರಿಹಾರ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಜಿಲ್ಲಾಧಿಕಾರಿಗಳ ಬ್ಯಾಂಕ್ ಖಾತೆಯಲ್ಲಿ 7093 ಕೋಟಿ ಹಣ ಇದೆ. ಹಾನಿಗೊಳಗಾದ ಮನೆಗಳಿಗೆ ಪರಿಹಾರ ಕೊಡಲು ತೊಂದರೆ ಇಲ್ಲ ಎಂದು ಸ್ಪಷ್ಟಪಡಿಸಿದರು.
ಡೆಂಘೀ ಜ್ವರ ಮಳೆಗಾಲದಲ್ಲಿ ಕಾಣಿಸಿಕೊಳ್ಳುತ್ತದೆ. ರಾಜ್ಯದಲ್ಲಿ ಈವರೆಗೆ 7362 ಡೆಂಘೀ ಪ್ರಕರಣಗಳು ಪತ್ತೆಯಾಗಿದ್ದು, ಇದಕ್ಕೆ ಈವರೆಗೆ 7 ಜನರು ಮೃತಪಟ್ಟಿದ್ದಾರೆ. ತಾಂತ್ರಿಕ ಸಲಹಾ ಸಮಿತಿ ಈ ಕುರಿತು ನಿನ್ನೆ(ಸೋಮವಾರ) ಸಭೆ ನಡೆಸಿದ್ದಾರೆ. ಆರೋಗ್ಯ ಸಚಿವರಿಗೆ TAC ಜೊತೆ ಸಭೆ ನಡೆಸಲು ಸೂಚಿಸಿದ್ದೇನೆ. ಸೊಳ್ಳು ಕಚ್ಚುವುದರಿಂದ ಡೆಂಘೀ ರೋಗ ಹರಡುತ್ತದೆ. ಹೀಗಾಗಿ ಸೊಳ್ಳೆ ಉತ್ಪಾದನೆ ಇರುವ ಕಡೆ ನಾಶ ಮಾಡಲು ಹೇಳಿದ್ದೇನೆ. ಇನ್ನು ಒಬ್ಬರಿಂದ ಮತ್ತೊಬ್ಬರಿಗೆ ಡೆಂಘೀ ರೋಗ ಹರಡುವುದಿಲ್ಲ. ಪ್ರತೀ ಜಿಲ್ಲಾಸ್ಪತ್ರೆಯಲ್ಲಿ 10 ಡೆಂಘೀ ವಾರ್ಡ್ ತೆರೆದು, ಟಾಸ್ಕ್ಫೋರ್ಸ್ ಮಾಡಲು ಸೂಚನೆ ನೀಡಿದ್ದೇನೆ. ಇದರ ಜೊತೆಗೆ ಸ್ಲಂ ನಿವಾಸಿಗಳಿಗೆ ಉಚಿತವಾಗಿ ಸೊಳ್ಳೆ ಪರದೆ ನೀಡಲು ಹೇಳಿದ್ದೇನೆ ಎಂದರು.