ಬೆಂಗಳೂರು/ಬೆಳಗಾವಿ: ಸರ್ಕಾರಿ ಜಮೀನಿನ ಅಕ್ರಮ ಪರಭಾರೆಗೆ ಸಹಕರಿಸಿದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತದೆ ಅಂತ ಕಂದಾಯ ಸಚಿವ ಕೃಷ್ಣಭೈರೇಗೌಡ (Krishna Byre Gowda) ಭರವಸೆ ನೀಡಿದ್ದಾರೆ.
ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿಯ ನಾರಾಯಣಸ್ವಾಮಿ (Narayanaswamy) ಪ್ರಶ್ನೆ ಕೇಳಿದರು. ಬೆಂಗಳೂರು, ಬೆಂಗಳೂರು ಗ್ರಾಮಾಂತರದಲ್ಲಿ ಸರ್ಕಾರಿ ಭೂಮಿ ಒತ್ತುವರಿ ಆಗಿದೆ. ಇದಕ್ಕೆ ಸರ್ಕಾರಿ ಅಧಿಕಾರಗಳೇ ಕೈ ಜೋಡಿಸಿದ್ದಾರೆ. ಇವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಅಂತ ಒತ್ತಾಯ ಮಾಡಿದ್ರು.
ಇದಕ್ಕೆ ಉತ್ತರ ನೀಡಿದ ಸಚಿವರು, ಬೆಂಗಳೂರು ನಗರ ಮತ್ತು ಗ್ರಾಮಾಂತರದಲ್ಲಿ 51,555 ಎಕರೆ ಸರ್ಕಾರಿ ಜಮೀನು ಗೋಮಾಳ ಅತಿಕ್ರಮವಾಗಿದೆ. ಈ ಸಂಬಂಧ 23307 ಪ್ರಕರಣ ದಾಖಲಾಗಿದೆ. 51,555 ಎಕರೆ ಪೈಕಿ 12434 ಪ್ರಕರಣಗಳಲ್ಲಿ ಸುಮಾರು 28,264 ಎಕರೆ ಒತ್ತುವರಿ ತೆರವು ಆಗಿದೆ. ರಾಜ್ಯಾದ್ಯಂತ 63,32,484 ಸರ್ಕಾರಿ ಎಕರೆ ಜಾಗ ಇದೆ. ಇದರಲ್ಲಿ 14,72,493 ಎಕರೆ ಜಮೀನು ಒತ್ತುವರಿ ಆಗಿದೆ ಎಂದರು. ವಿವಿಧ ನ್ಯಾಯಾಲಯಗಳಲ್ಲಿರುವ ಪ್ರಕರಣಗಳು, ಅಕ್ರಮ, ಸಕ್ರಮ ಯೋಜನೆ, ಸಾರ್ವಜನಿಕ ಬಳಕೆಗೆ 10,82,752 ಎಕರೆ ಜಮೀನು ಇದೆ. ಉಳಿದಂತೆ 3,89,741 ಎಕರೆ ಒತ್ತುವರಿ ತರವು ಮಾಡಬೇಕಿದೆ. ಈ ಪೈಕಿ 2,73,778 ಎಕರೆ ಒತ್ತುವರಿ ತೆರವು ಮಾಡಲಾಗಿದೆ ಎಂದರು.