ನಟ ಅಲ್ಲು ಅರ್ಜುನ್ ನಟನೆಯ ಪುಷ್ಪ 2 ಸಿನಿಮಾ ರಿಲೀಸ್ ಆಗಿದ್ದು ಬಾಕ್ಸ್ ಆಫೀಸ್ ನಲ್ಲಿ ಭರ್ಜರಿಯಾಗಿ ಕಲೆಕ್ಷನ್ ಮಾಡುತ್ತಿದೆ. ಆದರೆ ಈ ಸಂಭ್ರಮವನ್ನು ಅನುಭವಿಸಲು ಅಲ್ಲು ಅರ್ಜುನ್ ಗೆ ಸಾಧ್ಯವಾಗುತ್ತಿಲ್ಲ. ಯಾಕೆಂದರೆ ಅವರಿಗೆ ಒಂದರ ಹಿಂದೊಂದು ಸಂಕಷ್ಟ ಎದುರಾಗುತ್ತಿದೆ.
ಪುಷ್ಪ 2 ಸಿನಿಮಾದ ಪ್ರೀಮಿಯರ್ ವೇಳೆ ಸಂಧ್ಯಾ ಚಿತ್ರಮಂದಿರದಲ್ಲಿ ಉಂಟಾದ ಕಾಲ್ತುಳಿತ ಅಭಿಮಾನಿಯೊಬ್ಬರು ಮೃತರಾದ ಘಟನೆ ಇತ್ತೀಚೆಗೆ ನಡೆದಿತ್ತು. ಅದಕ್ಕೆ ಸಂಬಂಧಿಸಿದಂತೆ ಈಗ ಪ್ರತಿಭಟನೆ ಕೂಡ ನಡೆಯುತ್ತಿದೆ. ಅಲ್ಲು ಅರ್ಜುನ್ ಅವರ ಮನೆಯ ಎದುರು ಪ್ರತಿಭಟನೆ ಮಾಡಲಾಗಿದೆ. ಮೃತರ ಕುಟುಂಬಕ್ಕೆ 1 ಕೋಟಿ ರೂಪಾಯಿ ಪರಿಹಾರ ನೀಡಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ಮಾಡಲಾಗಿದ್ದು, ಈ ವೇಳೆ ಅಲ್ಲು ಅರ್ಜುನ್ ಅವರ ಮನೆಯ ಮೇಲೆ ಕಲ್ಲು ತೂರಾಟ ನಡೆದಿದೆ.
ಓಯು ಜಎಸಿ ಸಂಘಟನೆಯ ಸದಸ್ಯರು ಜ್ಯುಬಿಲಿ ಹಿಲ್ಸ್ನಲ್ಲಿ ಇರುವ ಅಲ್ಲು ಅರ್ಜುನ್ ನಿವಾಸದ ಎದುರು ಪ್ರತಿಭಟನೆ ಮಾಡಲು ಬಂದಿದ್ದಾರೆ. ಈ ವೇಳೆ ಪ್ರತಿಭಟನಾಕಾರರನ್ನು ಭದ್ರತಾ ಸಿಬ್ಬಂದಿ ತಡೆದಿದ್ದಾರೆ. ಇದರಿಂದ ಇನ್ನಷ್ಟು ರೊಚ್ಚಿಗೆದ್ದ ಪ್ರತಿಭಟನಾಕಾರರು ಅಲ್ಲು ಅರ್ಜುನ್ ಅವರ ಮನೆಯ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ ಎಂದು ವರದಿ ಆಗಿದೆ. ಮನೆಯ ಭದ್ರತಾ ಸಿಬ್ಬಂದಿ ಮೇಲೂ ಹಲ್ಲೆ ಮಾಡಲಾಗಿದೆ ಎನ್ನಲಾಗಿದೆ.
ಅಲ್ಲು ಅರ್ಜುನ್ ಅವರ ಮೇಲೆ ತೆಲಂಗಾಣ ಪೊಲೀಸರು ಕ್ರಮ ತೆಗೆದುಕೊಳ್ಳಲು ಮುಂದಾಗಿದ್ದರು. ಅನುಮತಿ ಪಡೆಯದೇ ಚಿತ್ರಮಂದಿರಕ್ಕೆ ಅಲ್ಲು ಅರ್ಜುನ್ ಭೇಟಿ ನೀಡಿದ್ದರಿಂದಲೇ ಕಾಲ್ತುಳಿತ ಉಂಟಾಯಿತು ಎಂದು ಪೊಲೀಸರು ಕೇಸ್ ದಾಖಲಿಸಿದ್ದಾರೆ. ಈ ಕೇಸ್ನಲ್ಲಿ ಅಲ್ಲು ಅರ್ಜುನ್ ಅವರನ್ನು ಬಂಧಿಸಲಾಗಿತ್ತು. ಆದರೆ ಅದೇ ದಿನ ಮಧ್ಯಂತರ ಜಾಮೀನು ಸಿಕ್ಕಿದ್ದರಿಂದ ಅವರನ್ನು ಬಿಡುಗಡೆ ಮಾಡಲಾಗಿತ್ತು.