ತುಮಕೂರು:– ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಪುರುಷರ ಸ್ನಾತಕೋತ್ತರ ವಿದ್ಯಾರ್ಥಿ ನಿಲಯ ಗಬ್ಬು ನಾರುತ್ತಿದೆ. ಕುವೆಂಪು ನಗರದಲ್ಲಿರುವ ವಿಶ್ವವಿದ್ಯಾಲಯದ ಹಾಸ್ಟೆಲ್ ನಲ್ಲಿ ಘಟನೆ ಜರುಗಿದೆ.
ಮುರಿದ ಕಿಟಕಿ, ಬಾಗಿಲುಗಳು, ಪಾಚಿ ಕಟ್ಟಿದ ಗೋಡೆಗಳಿಂದ ವಿದ್ಯಾರ್ಥಿಗಳು ಮೂಗು ಮುಚ್ಚಿಕೊಂಡು ಓಡಾಡುವಂತಾಗಿದೆ.
ಹಾಸ್ಟೆಲ್ನಲ್ಲಿ 250 ವಿದ್ಯಾರ್ಥಿಗಳಿಗೆ ಕೇವಲ 10 ಶೌಚಾಲಯಗಳಿವೆ. ಇರುವ ಶೌಚಾಲಯಗಳು ಒಂದು ವಾರದಿಂದ ಬ್ಲಾಕ್ ಆಗಿದ್ದು, ಪ್ರತಿ ದಿನ ಪರದಾಡುತ್ತಿದ್ದಾರೆ. ಈ ಬಗ್ಗೆ ಗಮನ ಹರಿಸಬೇಕಿದ್ದ ಅಧಿಕಾರಿಗಳು ಇತ್ತ ತಲೆ ಎತ್ತಿ ನೋಡುತ್ತಿಲ್ಲ. ನಿಲಯ ಪಾಲಕರು ವಾರಕ್ಕೊಮ್ಮೆ ‘ಅತಿಥಿ’ಯಂತೆ ಬಂದು ಹೋಗುತ್ತಿದ್ದಾರೆ.
ಹಾಸ್ಟೆಲ್ ಹಿಂಭಾಗದಲ್ಲಿರುವ ತೆರೆದ ಚರಂಡಿಯನ್ನು ಕಳೆದ ಒಂದು ವರ್ಷದಿಂದ ಮುಚ್ಚಿಲ್ಲ. ರಾತ್ರಿ ಸಮಯದಲ್ಲಿ ಯಾರಾದರೂ ಗಮನಿಸದೆ ಮುಂದೆ ಹೆಜ್ಜೆ ಹಾಕಿದರೆ ಅಪಾಯ ಖಚಿತ. ಹೊಸದಾಗಿ ಪ್ರವೇಶ ಪಡೆದಿರುವ ವಿದ್ಯಾರ್ಥಿಗಳಿಗೆ ಸೂಕ್ತವಾದ ಕೊಠಡಿ ವ್ಯವಸ್ಥೆ ಇಲ್ಲವಾಗಿದೆ. ಕೊಠಡಿಗಳ ಬಾಗಿಲು ಮುರಿದಿದ್ದು, ಹಾಸ್ಟೆಲ್ಗೆ ಭದ್ರತೆ ಕಲ್ಪಿಸಿಲ್ಲ.
ಪ್ರತಿ ದಿನ ಮೆನು ಪ್ರಕಾರ ಊಟ, ತಿಂಡಿ ನೀಡುತ್ತಿಲ್ಲ. ಮೆನು ಚಾರ್ಟ್ ಕೇವಲ ಬೆದರು ಬೊಂಬೆಯಂತಿದೆ. ಹಾಸ್ಟೆಲ್ನಲ್ಲಿ ಕೊಡುವ ಊಟದಲ್ಲಿ ರುಚಿ ಮತ್ತು ಗುಣಮಟ್ಟ ಎರಡೂ ಇರುವುದಿಲ್ಲ. ಸಮಸ್ಯೆಗಳ ಬಗ್ಗೆ ನಿಲಯ ಪಾಲಕರು ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಿಲ್ಲ ಹಾಸ್ಟೆಲ್ ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ಹೀಗಾಗಿ ವಿ.ವಿ ಕುಲಪತಿ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಕ್ರಮ ವಹಿಸಿ ಕನಿಷ್ಠ ಸೌಲಭ್ಯ ಕಲ್ಪಿಸಬೇಕು ಎಂದು ವಿದ್ಯಾರ್ಥಿಗಳು ಒತ್ತಾಯಿಸಿದ್ದಾರೆ.