ಬೆಂಗಳೂರು:- ರಾಜಧಾನಿ ಬೆಂಗಳೂರಿನಲ್ಲಿ ಸ್ವಚ್ಚತೆಯೇ ಮರೀಚಿಕೆಯಾಗಿದೆ. ಮಾರ್ಕೆಟ್ ಗಬ್ಬೆದ್ದು ನಾರುತ್ತಿದ್ದರೂ ಅರಿವು ಮೂಡಿಸಿ ಸ್ವಚ್ಛತೆ ಕಾಪಾಡುವಲ್ಲಿ ಮೌನವಾಗಿದೆ.
ಕೆಆರ್ ಮಾರ್ಕೆಟ್ ಜಂಕ್ಷನ್, ಚಿಕ್ಕಪೇಟೆ, ಮೈಸೂರು ರೋಡ್ ಸೇರಿದಂತೆ ಹಲವೆಡೆ ಹಬ್ಬಕ್ಕೆ ಅಂತಾ ತಂದಿದ್ದ ಬಾಳೇಕಂದು, ಹಣ್ಣುಗಳು, ಮಾವಿನಸೊಪ್ಪು ರಸ್ತೆಗಳಲ್ಲಿ ರಾಶಿ ರಾಶಿ ತ್ಯಾಜ್ಯ ಸೃಷ್ಟಿಸಿದ್ದು, ಗಾರ್ಡನ್ ಸಿಟಿಯ ರಸ್ತೆಗಳಲ್ಲಿ ಗಾರ್ಬೇಜ್ ರಾರಾಜಿಸುತ್ತಿದೆ.
ಇನ್ನು ಪ್ರತಿಬಾರಿ ಹಬ್ಬ ಬಂದಾಗಲೂ ಮಾರ್ಕೆಟ್ನಲ್ಲಿ ವ್ಯಾಪಾರಿಗಳಿಗೆ ಬಿಬಿಎಂಪಿ ಸ್ವಚ್ಛತೆಯ ಪಾಠ ಹೇಳುತ್ತಿದ್ದರೂ ಕೂಡ ವ್ಯಾಪಾರಿಗಳ ನಡೆಯಿಂದ ರಾಶಿ ರಾಶಿ ಕಸ ರಸ್ತೆಯ ಬದಿಯಲ್ಲೇ ರಾರಾಜಿಸುವಂತಾಗಿದೆ.
ಪ್ರತಿದಿನಕ್ಕಿಂತ ಸರಿಸುಮಾರು 5 ಸಾವಿರ ಟನ್ ಹೆಚ್ಚುವರಿ ಕಸ ಉತ್ಪತಿಯಾಗಿದ್ದು, ಇತ್ತ ಪ್ರಮುಖ ರಸ್ತೆಗಳು, ಜಂಕ್ಷನ್ ಬಳಿ ಕೊಳೆತ ಹಣ್ಣುಗಳು, ಉಳಿದ ಬಾಳೇಕಂದುಗಳು ಬೇಕಾಬಿಟ್ಟಿಯಾಗಿ ಬಿದ್ದಿರೋದು ಜನರಿಗೆ ಕಿರಿಕಿರಿ ಉಂಟು ಮಾಡಿದೆ. ಇತ್ತ ಹಬ್ಬದ
ವೇಳೆ ಘನತ್ಯಾಜ್ಯ ನಿರ್ವಹಣೆ ಮಾಡಿ ಎಂದ ಮಾರ್ಗಸೂಚಿ ಹೊರಡಿಸಿದ್ದ ಪಾಲಿಕೆ ರಾಶಿ ರಾಶಿ ಕಸ ಬಿದ್ದಿದ್ದರೂ ಕಸ ತೆರವು ಮಾಡದೇ ಇರೋದಕ್ಕೆ ಜನರು ಕಿಡಿಕಾರುತ್ತಿದ್ದಾರೆ.
ಸದ್ಯ ರಾಜಧಾನಿಯಲ್ಲಿ ಈಗಾಗಲೇ ಕಸದ ಸಮಸ್ಯೆ ಹಲವೆಡೆ ಸದ್ದುಮಾಡುತ್ತಿದೆ. ಇಂತಹ ಹೊತ್ತಲ್ಲೇ ಹಬ್ಬದ ಹಿನ್ನೆಲೆ ಮತ್ತಷ್ಟು ಕಸದ ರಾಶಿ ಹೆಚ್ಚಾಗಿದ್ದು, ಇತ್ತ ಹಬ್ಬದ ಸಂದರ್ಭ ಕಸವನ್ನು ಸೂಕ್ತವಾಗಿ ನಿರ್ವಹಣೆ ಮಾಡಿ ಎಂದು ಮಾರ್ಗಸೂಚಿ ಹೊರಡಿಸಿದ್ದ ಪಾಲಿಕೆ ಅಲರ್ಟ್ ಆಗಬೇಕಿದೆ. ಸದ್ಯ ಹಬ್ಬದ ಹಿನ್ನೆಲೆ ಬಹುತೇಕ ಪೌರಕಾರ್ಮಿಕರು ತಮ್ಮ ತಮ್ಮ ಊರುಗಳಿಗೆ ತೆರಳಿರುವುದು ಕೂಡ ಕಸದ ಸಮಸ್ಯೆ ಮತ್ತಷ್ಟು ಹೆಚ್ಚಲು ಕಾರಣವಾಗಿದೆ.