ಬೆಂಗಳೂರು:– ರಾಜ್ಯದಲ್ಲಿ ಕೆಲವು ದೂರು ದುಮ್ಮಾನಗಳಿಂದ ನಡೆಯುತ್ತಿದ್ದ ಡಯಾಲಿಸಿಸ್ ವ್ಯವಸ್ಥೆಯನ್ನ ಆರೋಗ್ಯಕರ ಹಂತಕ್ಕೆ ತರುವಲ್ಲಿ ಕಳೆದ 6 ತಿಂಗಳಿನಿಂದ ಸಾಕಷ್ಟು ಸವಾಲುಗಳನ್ನ ಎದುರಿಸಿದ್ದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಕೊನೆಗೂ ರಾಜ್ಯದ ಡಯಾಲಿಸಿಸ್ ವ್ಯವಸ್ಥೆಯನ್ನ ಸರಿ ದಾರಿಗೆ ತರುವತ್ತ ಮಹತ್ವದ ಪಾತ್ರ ವಹಿಸಿದ್ದಾರೆ.
ಜನಸಾಮಾನ್ಯರಿಗೆ ಸೋಂಕು ರಹಿತ ಡಯಾಲಿಸಿಸ್ ಸೇವೆ ಕಲ್ಪಿಸಲು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಆದ್ಯತೆ ನೀಡಿದ್ದರು. ಡಯಾಲಿಸಿಸ್ ಕೇಂದ್ರಗಳಲ್ಲಿ ಅಲ್ಲಲ್ಲಿ ಅಸ್ವಸ್ಥಗೊಂಡಿದ್ದ ಬಹುಬಳಕೆಯ ಡಯಾಲೈಸರ್ ಯಂತ್ರಗಳಿಂದ ಡಯಾಲಿಸಿಸ್ ಪಡೆಯುತ್ತಿದ್ದವರಿಗೆ ಸೋಂಕು ತಗುಲುತ್ತಿರುವುದನ್ನ ಗಮನಿಸಿದ್ದ ಸಚಿವ ದಿನೇಶ್ ಗುಂಡೂರಾವ್, ರಾಜ್ಯದ ಇಡೀ ಡಯಾಲಿಸಿಸ್ ವ್ಯವಸ್ಥೆಯನ್ನ ಸದೃಢಗೊಳಿಸುವ ನಿಟ್ಟಿನಲ್ಲಿ ಏಕ ಬಳಕೆಯ ಡಯಾಲೈಸರ್ ಯಂತ್ರಗಳನ್ನ ಅಳವಡಿಸಲು ನಿರ್ಧರಿಸಿದರು. ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ರಾಜ್ಯಾದ್ಯಂತ 800 ಹೊಸ ಏಕ ಬಳಕೆಯ ಡಯಾಲಿಸಿಸ್ ಯಂತ್ರಗಳನ್ನ ಅಳವಡಿಸುವ ಕಾರ್ಯಕ್ಕೆ ಮುಂದಾಗಿದ್ದರು.
ಇದೀಗ ಹೊಸ ಡಯಾಲೈಸರ್ ಗಳ ಅಳವಡಿಕೆ ಕಾರ್ಯ ಬಹುತೇಕ ಅಂತಿಮ ಘಟ್ಟಕ್ಕೆ ತಲುಪಿದ್ದು, ನಾಳೆಯಿಂದ ಏಕ ಬಳಕೆಯ ಡಯಾಲಿಸಿಸ್ ಆರೋಗ್ಯ ಸೇವೆ ಆರಂಭವಾಗಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಾಳೆ ಸಂಜೆ 5 ಗಂಟೆಗೆ ಬೆಂಗಳೂರಿನ ಕೆ.ಸಿ ಜನರಲ್ ಆಸ್ಪತ್ರೆಯಲ್ಲಿ ಹೊಸ ಡಯಾಲಿಸಿಸ್ ಸೇವೆಗೆ ಚಾಲನೆ ನೀಡಲಿದ್ದಾರೆ. ಬೆಂಗಳೂರಿನ ಕೆ.ಸಿಜನರಲ್ ಆಸ್ಪತ್ರೆಯೊಂದರಲ್ಲೇ 20 ಹೊಸ ಏಕ ಬಳಕೆಯ ಡಯಾಲೈಸರ್ ಯಂತ್ರಗಳನ್ನ ಅಳವಡಿಸಲಾಗಿದ್ದು, ಪ್ರತಿ ನಿತ್ಯ 72 ರೋಗಿಗಳಿಗೆ ಡಯಾಲಿಸಿಸ್ ಸೇವೆ ಒದಗಿಸುವ ಸಾಮರ್ಥ್ಯ ಕಲ್ಪಿಸಲಾಗಿದೆ.
ರಾಜ್ಯದಲ್ಲಿದ್ದ 171 ಡಯಾಲಿಸಿಸ್ ಕೇಂದ್ರಗಳನ್ನ 219 ಕ್ಕೆ ಹೆಚ್ಚಿಸಲಾಗಿದ್ದು, ಹೊಸದಾಗಿ 48 ತಾಲೂಕುಗಳಲ್ಲಿ ಡಯಾಲಿಸಿಸ್ ಕೇಂದ್ರಗಳನ್ನ ಆರಂಭಿಸಲಾಗಿದೆ. 219 ಕೇಂದ್ರಗಳಲ್ಲಿ ಒಟ್ಟು 800 ಏಕಬಳಕೆಯ ಡಯಾಲೈಸರ್ ಯಂತ್ರಗಳನ್ನ ಅಳವಡಿಸಲು ಕ್ರಮ ಕೈಗೊಳ್ಳಲಾಗಿದೆ. ಬೆಂಗಳೂರು ವಿಭಾಗದ 57 ಡಯಾಲಿಸಿಸ್ ಕೇಂದ್ರಗಳಲ್ಲಿ 250 ಯಂತ್ರಗಳು, ಮೈಸೂರು ವಿಭಾಗದ 55 ಕೇಂದ್ರಗಳಲ್ಲಿ 222 ಯಂತ್ರಗಳು, ಬೆಳಗಾವಿ ವಿಭಾಗದ 62 ಕೇಂದ್ರಗಳಲ್ಲಿ 201 ಯಂತ್ರಗಳು, ಕಲಬುರಗಿ ವಿಭಾಗದ 45 ಕೇಂದ್ರಗಳಲ್ಲಿ 127 ಯಂತ್ರಗಳು ಸೇರಿದಂತೆ ಒಟ್ಟು 800 ಏಕಬಳಕೆಯ ಡಯಾಲೈಸರ್ ಗಳ ಅಳವಡಿಕೆ ಕಾರ್ಯ ಅಂತಿಮ ಘಟ್ಟಕ್ಕೆ ತಲುಪಿದೆ
ನಾಳೆಯಿಂದ 475 ಏಕಬಳಕೆಯ ಡಯಾಲೈಸರ್ ಗಳು ಕಾರ್ಯ ಆರಂಭಿಸಲಿದ್ದು, ರೋಗಿಗಳಿಗೆ ಸೊಂಕು ರಹಿತ ಡಯಾಲಿಸಿಸ್ ಸೇವೆ ಲಭ್ಯವಾಗಲಿದೆ. ಉಳಿದ ಕೇಂದ್ರಗಳಲ್ಲೂ ಒಂದು ತಿಂಗಳೊಳಗೆ ಏಕ ಬಳಕೆಯ ಡಯಾಲಿಸಿಸ್ ಯಂತ್ರಗಳ ಸೇವೆ ಆರಂಭವಾಗಲಿದೆ.