ಟೀಮ್ ಇಂಡಿಯಾ ವಿರುದ್ಧ ಮೂರು ಪಂದ್ಯಗಳ ಟಿ20-ಐ ಸರಣಿ ನಡೆಯುತ್ತಿರುವ ನಡುವೆಯೇ ಬಾಂಗ್ಲಾದೇಶದ 38 ವರ್ಷದ ಸ್ಟಾರ್ ಆಲ್ ರೌಂಡರ್ ಮೊಹಮದುಲ್ಲಾ ಚುಟುಕು ಸ್ವರೂಪದ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ.
2027ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ರೋಹಿತ್ ಆಡಲಿದ್ದಾರೆ: ಬಾಲ್ಯದ ಕೋಚ್ ದಿನೇಶ್ ಲಾಡ್
ಇತ್ತೀಚೆಗಷ್ಟೇ ಕಾನ್ಪುರದಲ್ಲಿ ಭಾರತ ತಂಡದ ವಿರುದ್ಧದ ಎರಡನೇ ಟೆಸ್ಟ್ ಪಂದ್ಯಕ್ಕೂ ಮುನ್ನ ಮಾಜಿ ನಾಯಕ ಶಕೀಬ್ ಆಲ್ ಹಸನ್ ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್ ಜೀವನಕ್ಕೆ ವಿದಾಯ ಘೋಷಿಸಿದ್ದರು. ಅದೇ ಹಾದಿ ಅನುಸರಿಸಿರುವ ಮೊಹಮದುಲ್ಲಾ ಭಾರತ ವಿರುದ್ಧದ ಮೂರು ಪಂದ್ಯಗಳ ಚುಟುಕು ಸರಣಿಯೇ ತನ್ನ ಅಂತಿಮ ಟಿ20-ಐ ಪಂದ್ಯವೆಂದು ಘೋಷಿಸಿದ್ದಾರೆ. ಭಾರತದ ಆತಿಥ್ಯದಲ್ಲಿ ಆಯೋಜನೆಗೊಂಡಿದ್ದ 2023ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ವೈಯಕ್ತಿಕವಾಗಿ ಉತ್ತಮ ಪ್ರದರ್ಶನ ತೋರಿದ್ದ ಮೊಹಮದುಲ್ಲಾ, 2024 ರ ಡಿಸೆಂಬರ್ ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ನಡೆಯಲಿರುವ ಏಕದಿನ ಸರಣಿ ಹಾಗೂ 2025ರ ಚಾಂಪಿಯನ್ಸ್ ಟ್ರೋಫಿಯತ್ತ ತಮ್ಮ ಗಮನ ಕೇಂದ್ರೀಕರಿಸಿದ್ದಾರೆ.
“ನಾನು ಪೂರ್ವ ನಿರ್ಧಾರದಂತೆ ಟಿ20-ಐ ಕ್ರಿಕೆಟ್ ಗೆ ವಿದಾಯ ಘೋಷಿಸುತ್ತಿದ್ದೇನೆ. ಈ ಕುರಿತು ನಾಯಕ ನೈಜ್ಮುಲ್ ಹುಸೇನ್ ಶಾಂತೊ ಹಾಗೂ ಹೆಡ್ ಕೋಚ್ ಜೊತೆ ಸುದೀರ್ಘ ಸಂವಾದ ನಡೆಸಿದ್ದು, ನನ್ನ ನಿರ್ಧಾರವನ್ನು ಬಿಸಿಬಿ ಅಧ್ಯಕ್ಷರಿಗೂ ಮನವರಿಕೆ ಮಾಡಿಕೊಟ್ಟಿದ್ದೇನೆ. ಚುಟುಕು ಕ್ರಿಕೆಟ್ ನಿಂದ ನಿವೃತ್ತಿ ಪಡೆದು ಏಕದಿನ ಕ್ರಿಕೆಟ್ ನತ್ತ ಸಂಪೂರ್ಣವಾಗಿ ಗಮನ ಹರಿಸಲು ಇದು ಸೂಕ್ತ ಸಮಯವಾಗಿದೆ,” ಎಂದು ಬಾಂಗ್ಲಾದೇಶದ ಸ್ಟಾರ್ ಆಲ್ ರೌಂಡರ್ ತಿಳಿಸಿದ್ದಾರೆ.