ನವದೆಹಲಿ : ನವದೆಹಲಿ ರೈಲು ನಿಲ್ದಾಣದಲ್ಲಿ ಕಾಲ್ತುಳಿತ ಸಂಭವಿಸಿದ್ದು, 18 ಮಂದಿ ಸಾವನ್ನಪ್ಪಿದ್ದಾರೆ. ಮಹಾಕುಂಭ ಸಾವಿರಾರು ಭಕ್ತರು ಪ್ರಯಾಗರಾಜ್ಗೆ ತೆರಳುತ್ತಿದ್ದರಿಂದ ಜನಸಂದಣಿಯುಂಟಾದ ಪರಿಣಾಮ ಈ ದುರಂತ ಸಂಭವಿಸಿದೆ. ನಾನು ಈವರೆಗೂ ಇಂತ ಜನದಟ್ಟಣೆ ನೋಡೇ ಇಲ್ಲ ಎಂದು ಅಲ್ಲಿನ ಅಧಿಕಾರಿ ಪ್ರತಿಕ್ರಿಯಿಸಿದ್ದಾರೆ,
ಈ ಘಟನೆಯ ಕುರಿತು ಮಾತನಾಡಿರುವ ಪ್ರತ್ಯಕ್ಷದರ್ಶಿ ಐಎಎಫ್ ಸಿಬ್ಬಂದಿ ಪ್ರಯಾಣಿಕರ ಮನವೊಲಿಸುವ ಪ್ರಯತ್ನಗಳು ನಡೆದರೂ, ಸಹ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರುವುದನ್ನು ತಡೆಯಲಾಗಲಿಲ್ಲ. ಜನದಟ್ಟಣೆ ನಿಯಂತ್ರಿಸಲು ಎಷ್ಟು ಪ್ರಯತ್ನಿಸಿದರೂ, ಜನರು ಮಾತೇ ಕೇಳುವ ಸ್ಥಿತಿಯಲ್ಲಿರಲಿಲ್ಲ ಎಂದಿದ್ದಾರೆ. ರೈಲ್ವೇ ನಿಲ್ದಾಣದಲ್ಲಿ ತ್ರಿಸೇವಾ ಕಚೇರಿ ಇದೆ. ನನ್ನ ಕರ್ತವ್ಯ ಮುಗಿಸಿ ಹಿಂತಿರುಗುತ್ತಿದ್ದಾಗ ಭಾರೀ ಜನಸಂದಣಿಯನ್ನು ನೋಡಿದೆ. ಈ ವೇಳೆ ಜನರ ಮನವೊಲಿಸಲು ಪ್ರಯತ್ನಿಸಿದ್ದು, ಅನೌನ್ಸ್ ಕೂಡ ಮಾಡಿದೆ. ಆದರೆ ಜನರು ಅದನ್ನು ಕೇಳಲೇ ಇಲ್ಲ ಎಂದಿದ್ದಾರೆ.
ಆದರೆ ಈ ಬಗ್ಗೆ ಮತ್ತೋರ್ವ ಪ್ರತ್ಯಕ್ಷದರ್ಶಿ ಪ್ರಯಾಣಿಕರು ಪ್ರತಿಕ್ರಿಯಿಸಿದ್ದು, ಮಿತಿ ಮೀರಿದ ಜನ ಸೇರಿದ್ದರು. ಸೇತುವೆಯ ಮೇಲೆ ಜನ ಜಮಾಯಿಸಿದ್ದರು. ಇಷ್ಟೊಂದು ಜನಸಂದಣಿಯನ್ನು ನಾವು ಎಂದೂ ನೋಡೇ ಇರಲಿಲ್ಲ. ಹಬ್ಬ ಹರಿದಿನಗಳಲ್ಲಿಯೂ ರೈಲು ನಿಲ್ದಾಣದಲ್ಲಿ ಇಷ್ಟೊಂದು ಜನಸಂದಣಿಯನ್ನು ನಾನು ನೋಡಿರಲಿಲ್ಲ. ಆಡಳಿತದ ಜನರು ಮತ್ತು ಎನ್ಡಿಆರ್ಎಫ್ ಸಿಬ್ಬಂದಿಯೂ ಅಲ್ಲಿದ್ದರು, ಆದರೆ ಜನಸಂದಣಿ ಮಿತಿ ಮೀರಿದಾಗ ಅವರನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ ಎಂದಿದ್ದಾರೆ. ಆದರೆ ಮತ್ತೊಬ್ಬ ಪ್ರತ್ಯಕ್ಷ ದರ್ಶಿ ಅಲ್ಲಿ ಜನಸಂದಣಿ ನಿಯಂತ್ರಿಸೋಕೆ ಸಿಬ್ಬಂದಿಯೇ ಇರಲಿಲ್ಲ ಎಂದು ಆರೋಪಿಸಿದ್ದಾರೆ.
ಆದರೆ ಕಾಲ್ತುಳಿತದಲ್ಲಿ ತನ್ನ ಸಹೋದರಿಯನ್ನು ಕಳೆದುಕೊಂಡ ಪ್ರಯಾಣಿಕರೊಬ್ಬರು ಮಾತನಾಡಿ, ನಾವು 12 ಜನರು ಮಹಾಕುಂಭಕ್ಕೆ ಹೋಗುತ್ತಿದ್ದೆವು. ನಾವು ಇನ್ನೂ ಸಹ ಮೆಟ್ಟಿಲು ಹತ್ರನೇ ಇದ್ದೆವು. ಆಗಲೇ ನನ್ನ ಸಹೋದರಿ ಸೇರಿದಂತೆ ನನ್ನ ಕುಟುಂಬವು ಆ ಗುಂಪಿನಲ್ಲಿ ಸಿಲುಕಿಕೊಂಡಿತ್ತು. ಅರ್ಧ ಗಂಟೆಯ ನಂತರ ನಮ್ಮ ಸಹೋದರಿ ನಾಪತ್ತೆಯಾಗಿದ್ದರು, ಅವರು ಕಾಲ್ತುಳಿಯತದಲ್ಲಿ ಸಿಲುಕಿ ಆಗಲೇ ಸಾವನ್ನಪ್ಪಿದ್ದಳು ಎಂದಿದ್ದಾರೆ.