ಮಂಡ್ಯ:- ವಕ್ಫ್ ವಿರುದ್ಧ ಸಮರ ಸಾರಿರುವ ಇಲ್ಲಿನ ರೈತರು ಶ್ರೀರಂಗಪಟ್ಟಣ ಬಂದ್ಗೆ ವಿವಿಧ ಸಂಘಟನೆಗಳಿಂದ ಕರೆ ನೀಡಲಾಗಿದೆ. ಬೆಳಗ್ಗೆ 6 ಗಂಟೆಯಿಂದ ಸಂಜೆ 5 ಗಂಟೆವರೆಗೆ ಬಂದ್ ಆಚರಣೆ ಮಾಡಲಾಗುತ್ತಿದ್ದು, ಸಹಕರಿಸುವಂತೆ ಸಾರ್ವಜನಿಕರಿಗೆ ಮನವಿ ಮಾಡಲಾಗಿದೆ.
ವಿಶ್ವ ಹಿಂದೂ ಪರಿಷತ್, ಭಜರಂಗದಳ, ದಲಿತ ಸಂಘಟನೆಗಳು, ಕನ್ನಡಪರ, ರೈತ ಸಂಘಟನೆಗಳು ಸೇರಿ ಹಲವು ಸಂಘಟನೆಗಳಿಂದ ಕರೆ ನೀಡಲಾಗಿದೆ. 50ಕ್ಕೂ ಹೆಚ್ಚು ರೈತರ ಆರ್ಟಿಸಿಗಳಲ್ಲಿ ವಕ್ಫ್ ಹೆಸರು ಉಲ್ಲೇಖಿಸಲಾಗಿದೆ. ರೈತರ ಭೂಮಿ, ಪುರಾತತ್ವ ಇಲಾಖೆಯ ಕಟ್ಟಡಗಳು, ಕೋಟೆ, ಸಾರ್ವಜನಿಕ ಪಾರ್ಕ್ಗಳು ಸಾಲದ ಕಾಲಂನಲ್ಲಿ ವಕ್ಫ್ ಮಂಡಳಿ ಆಸ್ತಿ ಎಂದು ಉಲ್ಲೇಖಿಸಲಾಗಿದೆ. ಹಾಗಾಗಿ ಭೂ ದಾಖಲೆಗಳಲ್ಲಿ ವಕ್ಫ್ ಹೆಸರು ತೆಗೆಯುವಂತೆ ಆಗ್ರಹಿಸಿ ಬಂದ್ಗೆ ಕರೆ ನೀಡಲಾಗಿದೆ.
ವಕ್ಫ್ ವಿವಾದ ಜಿಲ್ಲೆಯ ರೈತರನ್ನ ಬಿಟ್ಟುಬಿಡದೇ ಕಾಡುತ್ತಿದೆ. ಅದರಲ್ಲೂ ಕೋಟೆನಗರಿ ಶ್ರೀರಂಗಪಟ್ಟಣ ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಆತಂಕವನ್ನೇ ಸೃಷ್ಠಿ ಮಾಡಿದೆ. ಆರ್ಟಿಸಿಯಲ್ಲಿ ಸ್ವಾಧೀನದಾರರ ಕಲಂ ನಲ್ಲಿ ರೈತರ ಹೆಸರಿದ್ದರೂ ಋಣ ಕಲಂನಲ್ಲಿ ವಕ್ಫ್ ಹೆಸರು ನಮೂದಿಸಲಾಗಿದೆ. 2014-15 ರಲ್ಲಿ ಈ ರೀತಿ ಉಲ್ಲೇಖವಾಗಿದೆ.
ಕೇವಲ ರೈತರ ಜಮೀನು ಮಾತ್ರವಲ್ಲದೆ ಸರ್ಕಾರಿ ಶಾಲೆ, ಪಾರಂಪರಿಕ ಕಟ್ಟದ, ಪುರಾತತ್ವ ಇಲಾಖೆ ಆಸ್ತಿಯ ಮೇಲೆ ವಕ್ಫ್ ಕಣ್ಣು ಬಿದ್ದಿದೆ. ಇನ್ನು ರೈತರು ಜಮೀನು ಮಾರಾಟ, ಜಮೀನು ಹಂಚಿಕೆ ಮಾಡಿಕೊಳ್ಳುವ ಸಲುವಾಗಿ ಆರ್ಟಿಸಿ ಪರಿಶೀಲನೆ ಮಾಡಿದಾಗ ವಕ್ಫ್ ಭೂತ ಎಂಟ್ರಿಕೊಟ್ಟಿರುವುದು ಬೆಳಕಿಗೆ ಬಂದಿದೆ. ಇದು ಅನ್ನದಾತರ ಆತಂಕಕ್ಕೆ ಕಾರಣವಾಗಿದೆ.