ಬಳ್ಳಾರಿ: ಮಾಜಿ ಸಚಿವ ಶ್ರೀರಾಮುಲು ಸಹೋದರಿ ಮಾಜಿ ಸಂಸದೆ ಜೆ.ಶಾಂತಾ ಅವರು ಬಿಜೆಪಿಗೆ ಗುಡ್ ಬೈ ಹೇಳಿದ್ದಾರೆ. ವೈಎಸ್ಆರ್ ಕಾಂಗ್ರೆಸ್ ಸೇರ್ಪಡೆಗೊಳ್ಳುವ ಮೂಲಕ ಕರ್ನಾಟಕ ರಾಜಕಾರಣ ಬಿಟ್ಟು ಆಂಧ್ರಪ್ರದೇಶದ ರಾಜಕಾರಣಕ್ಕೆ ಅವರು ಎಂಟ್ರಿ ಕೊಟಿದ್ದಾರೆ. ವಿಜಯವಾಡ ತಾಡಿಪಲ್ಲಿ ಸಿಎಂ ಕ್ಯಾಂಪ್ ಆಫೀಸ್ನಲ್ಲಿ ಆಂಧ್ರ ಸಿಎಂ ಜಗನ್ಮೋಹನ್ ರೆಡ್ಡಿ ನೇತೃತ್ವದಲ್ಲಿ ಅವರು ವೈಎಸ್ಆರ್ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ.
ಮುಂದಿನ ಲೋಕಸಭಾ ಚುನಾವಣೆಯಲ್ಲಿ ವೈಎಸ್ಆರ್ ಪಕ್ಷದಿಂದ ಹಿಂದುಪುರ ಕ್ಷೇತ್ರದಿಂದ ಸ್ಪರ್ಧಿಸುವ ಸಾಧ್ಯತೆ ಇದೆ. ಈ ಕ್ಷೇತ್ರದಲ್ಲಿ ವಾಲ್ಮೀಕಿ ಸಮುದಾಯದ 4.5 ಲಕ್ಷ ಮತದಾರರಿದ್ದಾರೆ. ಇದೇ ಕಾರಣಕ್ಕೆ ಅವರು ಹಿಂದುಪುರ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದಾರೆ. ಕರ್ನಾಟಕದಲ್ಲಿ ವಾಲ್ಮೀಕಿ ಜಾತಿ ಪರಿಶಿಷ್ಟ ಪಂಗಡಕ್ಕೆ ಸೇರಿದ್ದರೆ,
ಆಂಧ್ರದಲ್ಲಿ ಹಿಂದುಳಿದ ವರ್ಗಕ್ಕೆ ಸೇರಿದೆ. ಜಗನ್ಮೋಹನ್ ರೆಡ್ಡಿಯವರು ಸಂಸದಾಗಿದ್ದಾಗ ಲೋಕಸಭೆಯಲ್ಲಿ ಶಾಂತಾ ಪರಿಚಯವಾಗಿದ್ದು, ಆಂಧ್ರದ ರಾಜಕೀಯ ಎಂಟ್ರಿಗೆ ಅಂದಿನ ಪರಿಚಯ ಕಾರಣವಾಗಿದೆ. ಇತ್ತ ಬಳ್ಳಾರಿಯ ಬಿಜೆಪಿಯ ಲೋಕಸಭಾ ಟಿಕೆಟ್ ಶ್ರೀರಾಮುಲು ಅವರಿಗೆ ಸಿಗುವ ಸಾಧ್ಯತೆ ಇರುವುದರಿಂದ ಅವರು ಹಿಂದುಪುರ ಕಡೆಗೆ ಮುಖ ಮಾಡಿದ್ದಾರೆ ಎನ್ನಲಾಗಿದೆ.