ಬೆಂಗಳೂರು: ಶ್ರೀರಾಮನ ಶಕ್ತಿ, ಹನುಮನ ಭಕ್ತಿಯ ಕೆಣಕಿದ ರಾವಣನೇ ಉಳಿಯಲಿಲ್ಲ, ರಾಜಣ್ಣ ಯಾವ ಲೆಕ್ಕ? ಎಂದು ಬಿಜೆಪಿ (BJP), ಸಚಿವ ರಾಜಣ್ಣ (KN Rajanna) ಅವರಿಗೆ ತಿರುಗೇಟು ನೀಡಿದೆ.
ʻಒಂದು ಟೆಂಟ್ನಲ್ಲಿ ಎರಡು ಗೊಂಬೆ ಇಟ್ಟು ಇದೇ ಶ್ರೀರಾಮ ಅಂತ ಹೇಳ್ತಿದ್ರುʼ ಎಂಬ ಸಚಿವ ಕೆ.ಎನ್ ರಾಜಣ್ಣ ಹೇಳಿಕೆ ಕುರಿತು ಸೋಶಿಯಲ್ ಮೀಡಿಯಾ ಮೂಲಕ ಪ್ರತಿಕ್ರಿಯಿಸಿದ ಬಿಜೆಪಿ, ಶ್ರೀರಾಮನ (Shri Rama) ಶಕ್ತಿ, ಹನುಮನ ಭಕ್ತಿಯ ಕೆಣಕಿದ ರಾವಣನೇ ಉಳಿಯಲಿಲ್ಲ, ರಾಜಣ್ಣ ಯಾವ ಲೆಕ್ಕ? ಎಂದು ಪ್ರಶ್ನಿಸಿದೆ.
ಹಿಂದೂ ಧರ್ಮವನ್ನು ಅವಹೇಳನ ಮಾಡುವುದು, ಹಿಂದೂ ಭಾವನೆಗಳಿಗೆ ಧಕ್ಕೆ ಉಂಟುಮಾಡುವುದು ಕಾಂಗ್ರೆಸ್ ಪಕ್ಷಕ್ಕೆ ಅಂಟಿದ ಕುಷ್ಠ ರೋಗವಿದ್ದಂತೆ. ಶತ ಶತಮಾನಗಳ ಕೋಟ್ಯಂತರ ರಾಮಭಕ್ತರ ಹೋರಾಟ, ಸಹಸ್ರಾರು ಕರಸೇವಕರ ಬಲಿದಾನಗಳಿಂದ ಭವ್ಯ ರಾಮಮಂದಿರದಲ್ಲಿ ಬಾಲರಾಮ ನೆಲೆಸುತ್ತಿರುವ ಸಮಯದಲ್ಲಿ, ಶ್ರೀರಾಮ ಸೀತೆಯರನ್ನು ಗೊಂಬೆಗೆ ಹೋಲಿಸುತ್ತಿರುವ ಸಹಕಾರ ಸಚಿವ ರಾಜಣ್ಣರವರೇ, ನಾಡಿನ ಜನರಷ್ಟೇ ಅಲ್ಲ, ನಿಮ್ಮನ್ನು ಕಾಂಗ್ರೆಸ್ ಕಾರ್ಯಕರ್ತರೂ ಕ್ಷಮಿಸಲಾರರು ಎಂದು ಅಸಮಾಧಾನ ಹೊರಹಾಕಿದೆ.
ಅಧಿಕಾರದ ಮದ, ಕಾಂಗ್ರೆಸ್ ಗುಲಾಮಿತನದಿಂದ ಹೊರಬಂದು, ನಿಮ್ಮ ಕ್ಷೇತ್ರದ ಮತದಾರರನ್ನಾದರೂ ಕೇಳಿ, ನಿಮ್ಮ ಕುಟುಂಬಸ್ಥರನ್ನಾದರೂ ಕೇಳಿ ತಿಳಿಯಿರಿ ಎಂದು ಕುಟುಕಿದೆ.