ಶ್ರೀಲಂಕಾ ನೌಕಾ ಪಡೆ ಹಾರಿಸಿದ ಗುಂಡಿನಿಂದ ಬಂಧಿತ 13 ಭಾರತೀಯ ಮೀನುಗಾರರಲ್ಲಿ ಇಬ್ಬರು ಗಾಯಗೊಂಡಿದ್ದಾರೆ ಎಂದು ಪುದುಚೇರಿ ಸರಕಾರದ ಅಧಿಕಾರಿ ಮಾಹಿತಿ ನೀಡಿದ್ದಾರೆ.
ಶ್ರೀಲಂಕಾದ ನೌಕಾ ಪಡೆ ಮಂಗಳವಾರ 13 ಭಾರತೀಯ ಮೀನುಗಾರರನ್ನು ಬಂಧಿಸಿತ್ತು. ಈ ವೇಳೆ ಮೀನುಗಾರರು ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದು ಶ್ರೀಲಂಕಾದ ನೌಕಾ ಪಡೆ ಗುಂಡು ಹಾರಿಸಿತು. ಇದರಿಂದ ಇಬ್ಬರು ಮೀನುಗಾರರು ಗಂಭಿರವಾಗಿ ಗಾಯಗೊಂಡರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಂತರ ರಾಷ್ಟ್ರೀಯ ಸಾಗರ ಗಡಿ ದಾಟಿದ ಹಾಗೂ ಶ್ರೀಲಂಕಾ ಜಲ ಭಾಗದಲ್ಲಿ ಮೀನುಗಾರಿಕೆ ನಡೆಸಿದ ಆರೋಪದಲ್ಲಿ ಶ್ರೀಲಂಕಾ ನೌಕಾ ಪಡೆ ತಮಿಳುನಾಡು ಹಾಗೂ ಪುದುಚೇರಿಯ 13 ಮಂದಿ ಮೀನುಗಾರರನ್ನು ಬಂಧಿಸಿತು. ಅಲ್ಲದೆ, ಮೀನುಗಾರಿಕೆಗೆ ಬಳಸಿದ ಯಾಂತ್ರೀಕೃತ ದೋಣಿಗಳನ್ನು ವಶಕ್ಕೆ ತೆಗೆದುಕೊಂಡಿತು.
ಗಂಭೀರ ಗಾಯಗೊಂಡ ಇಬ್ಬರು ಮೀನುಗಾರರನ್ನು ಜಾಫ್ನಾದ ಟೀಚಿಂಗ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಇತರ ಮೂವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಅವರಿಗೆ ಅವರಿಗೆ ಚಿಕಿತ್ಸೆ ನೀಡಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.
ಶ್ರೀಲಂಕಾದ ನೌಕಾ ಪಡೆ ಭಾರತೀಯ ಮೀನುಗಾರರ ಮೇಲೆ ಗುಂಡು ಹಾರಿಸಿದ ಹಿನ್ನೆಲೆಯಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೊಸದಿಲ್ಲಿಯಲ್ಲಿರುವ ಶ್ರೀಲಂಕಾ ಉಸ್ತುವಾರಿ ಹೈಕಮಿಷನರ್ ಅವರನ್ನು ಕರೆಸಿ ಮಾತುಕತೆ ನಡೆಸಿದ್ದಾರೆ.