ಧಾರವಾಡ: ಈ ಬಾರಿ ಎಸ್ಎಸ್ಎಲ್ಸಿ ಫಲಿತಾಂಶದಲ್ಲಿ ಧಾರವಾಡ ಜಿಲ್ಲೆ ಗಣನೀಯ ಸಾಧನೆ ಮಾಡಬೇಕು ಎಂಬ ಉದ್ದೇಶದಿಂದ ಮಿಷನ್ ವಿದ್ಯಾಕಾಶಿ ಎಂಬ ಹೆಸರಿನಡಿ ಕಾರ್ಯಕ್ರಮ ರೂಪಿಸಲಾಗಿದೆ. ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಧಾರವಾಡ ಜಿಲ್ಲೆಯ ಮಕ್ಕಳು ಉತ್ತಮ ಫಲಿತಾಂಶ ಪಡೆದು ರಾಜ್ಯದಲ್ಲಿ ಧಾರವಾಡ ಜಿಲ್ಲೆ ಟಾಪ್ 10ರ ಪಟ್ಟಿಯಲ್ಲಿ ಬರಬೇಕು, ಕಲಿಕಾ ಗುಣಮಟ್ಟ ಸುಧಾರಿಸಿ ಆ ಮೂಲಕ ವಿದ್ಯಾಕಾಶಿ ಎಂಬ ಹೆಸರನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಬೇಕು ಎಂಬ ಉದ್ದೇಶ ಈ ಮಿಷನ್ ವಿದ್ಯಾಕಾಶಿಯದ್ದಾಗಿದೆ.
ಇನ್ನೇನು ಮಾರ್ಚ್ ತಿಂಗಳಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆ ನಡೆಯಲಿವೆ. ಪರೀಕ್ಷೆ ಹಿನ್ನೆಲೆಯಲ್ಲಿ ಧಾರವಾಡ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಸ್ವತಃ ಧಾರವಾಡ ಜಿಲ್ಲೆಯ ವಿವಿಧ ಹೈಸ್ಕೂಲ್ಗಳಿಗೆ ಭೇಟಿ ನೀಡಿ ಎಸ್ಎಸ್ಎಲ್ಸಿ ಮಕ್ಕಳೊಂದಿಗಷ್ಟೇ ಅಲ್ಲದೇ ಪಾಲಕರ ಜೊತೆಯೂ ಸಂವಾದ ಮಾಡುತ್ತಿದ್ದಾರೆ. ಧಾರವಾಡ ತಾಲೂಕಿನ ಉಪ್ಪಿನ ಬೆಟಗೇರಿ ಗ್ರಾಮದ ಎಸ್ಜಿವಿ ಹೈಸ್ಕೂಲ್ಗೆ ಭೇಟಿ ನೀಡಿದ ಡಿಸಿ ದಿವ್ಯ ಪ್ರಭು, ಎಸ್ಸೆಸ್ಸೆಲ್ಸಿ ಮಕ್ಕಳೊಂದಿಗೆ ಸಂವಾದ ನಡೆಸಿದರು. ಅನೇಕ ಮಕ್ಕಳು ತಮಗಿರುವ ಸಂದೇಹಳನ್ನು ಡಿಸಿ ಅವರಿಗೆ ಕೇಳಿ ಬಗೆಹರಿಸಿಕೊಂಡಿದ್ದು ವಿಶೇಷವಾಗಿತ್ತು. ಜಿಲ್ಲಾಧಿಕಾರಿಗಳು ಮಕ್ಕಳಿಗೆ, ಪರೀಕ್ಷೆ ಹೇಗೆ ಎದುರಿಸಬೇಕು. ಅದಕ್ಕೆ ತಯಾರಿ ಹೇಗೆ ಮಾಡಿಕೊಳ್ಳಬೇಕು ಎಂಬ ವಿಷಯಗಳನ್ನು ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು.
ಅಲ್ಲದೇ ಪಾಲಕರೊಂದಿಗೂ ಜಿಲ್ಲಾಧಿಕಾರಿಗಳು ಸಂವಾದ ನಡೆಸಿದರು. ಮಕ್ಕಳ ಮೇಲೆ ಯಾವ ರೀತಿ ನಿಗಾ ವಹಿಸಬೇಕು. ಶಾಲೆಯಲ್ಲಿ ಶಿಕ್ಷಣದ ಗುಣಮಟ್ಟ ಹೇಗಿದೆ ಎಂಬ ಎಲ್ಲಾ ವಿಷಯಗಳನ್ನು ಪಾಲಕರೊಂದಿಗೆ ಸಂವಾದ ನಡೆಸಿ ಮಾಹಿತಿ ಪಡೆದುಕೊಂಡರು. ಅನೇಕ ಶಾಲೆಯ ಶಿಕ್ಷಕರು ತಮ್ಮ ಶಾಲಾ ಮಕ್ಕಳ ಫಲಿತಾಂಶದ ಬಗ್ಗೆ ಮಾಹಿತಿ ನೀಡಿದರು.