ಹಿಂಗಾರು ಕೈಕೊಟ್ಟಿದ್ದರೂ ಒಂದಷ್ಟು ಕೆರೆಗಳಲ್ಲಿ ನೀರಿರುವುದರಿಂದ ಮತ್ಸ್ಯ ಕೃಷಿ ತೃಪ್ತಿದಾಯಕವಾಗಿದ್ದು, ಈವರೆವಿಗೆ 36.87 ಲಕ್ಷ ಮೀನು ಮರಿಗಳನ್ನು ನಾನಾ ಕೆರೆಗಳಲ್ಲಿ ಬಿತ್ತನೆ ಮಾಡಲಾಗಿದೆ.
ಮೀನುಗಾರಿಕೆಯನ್ನೇ ನಂಬಿ ಸಾವಿರಾರು ಮಂದಿ ಜೀವನ ನಡೆಸುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಮೀನಿಗೂ ಸಾಕಷ್ಟು ಬೇಡಿಕೆ ಇದೆ. ಅದಕ್ಕೆ ಪೂರಕವಾಗಿ ಜಿಲ್ಲೆಯಲ್ಲಿ ಈ ಬಾರಿ ಗುರಿಯಷ್ಟು ಸಾಧನೆ ಆಗದಿದ್ದರೂ ಮತ್ಸ್ಯ ಬಿತ್ತನೆ ತೃಪ್ತಿಕರವಾಗಿದೆ.
‘ಕನಿಷ್ಠ 4 ರಿಂದ 5 ಅಡಿ ನೀರು ಇರುವ ಹಾಗೂ ಅದೇ ಮಟ್ಟದಲ್ಲಿ 8 ತಿಂಗಳು ಕಾಲ ನೀರು ನಿಲ್ಲುವ ಕೆರೆಗಳಲ್ಲಿ ಮೀನುಮರಿಗಳ ಬಿತ್ತನೆಯನ್ನು ಮಾಡಲಾಗುತ್ತದೆ. 4 ಅಡಿಯೂ ನೀರಿಲ್ಲದ ಕೆರೆಗಳಲ್ಲಿ ಮೀನು ಬಿತ್ತನೆ ಮಾಡಿದರೆ ಪ್ರಯೋಜನವಿಲ್ಲ. ಅಲ್ಲದೇ ಬಿತ್ತನೆ ನಂತರ ಮೂರ್ನಾಲ್ಕು ತಿಂಗಳಲ್ಲಿ ಕೆರೆಯಲ್ಲಿನ ನೀರು ಬತ್ತಿ ಹೋದರೂ ಮೀನು ಬೆಳವಣಿಗೆ ಸಾಧ್ಯವಿಲ್ಲ. ಆದ್ದರಿಂದ ಕನಿಷ್ಠ 8 ತಿಂಗಳ ಕಾಲ 5 ಅಡಿ ಮೇಲ್ಪಟ್ಟು ನೀರು ನಿಲ್ಲುವಂತಹ ಕೆರೆಗಳನ್ನೇ ಮೀನು ಕೃಷಿಗೆ ಆಯ್ಕೆ ಮಾಡಲಾಗುತ್ತದೆ,” ಎನ್ನುತ್ತಾರೆ ಮೀನುಗಾರಿಕೆ ಇಲಾಖೆ ಅಧಿಕಾರಿಗಳು.
ಮೀನುಗಾರಿಕೆ ಇಲಾಖೆಯು ಜಿಲ್ಲೆಯಲ್ಲಿ ಹೆಚ್ಚು ನೀರು ಇರುವ ಜಲಾಶಯ, ಕೆರೆಗಳಲ್ಲಿ ಮೀನುಮರಿ ಸಾಕಣೆ ಮಾಡಲು ಟೆಂಡರ್ ಆಹ್ವಾನಿಸುತ್ತದೆ. ಈ ಬಾರಿ 21 ಕೆರೆಗಳನ್ನು ಗುತ್ತಿಗೆ ನೀಡಲಾಗಿದೆ. 31 ಕೆರೆಗಳಿಗೆ ಟೆಂಡರ್, ಹರಾಜು ಆಗಿದೆ. 5 ಕೆರೆಗಳು ಪರವಾನಗಿ ವ್ಯಾಪ್ತಿಯಲ್ಲಿವೆ.