ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸರಿಗಮಪ ಸಂಗೀತ ರಿಯಾಲಿಟಿ ಶೋನಲ್ಲಿ ಜ್ಯೂರಿ ಪ್ಯಾನೆಲ್ನಲ್ಲಿ ಇರುತ್ತಿದ್ದ ಬಹುವಾದ್ಯ ಪರಿಣಿತರಾಗಿ ಎಸ್. ಬಾಲಿ ಎಂದೇ ಪ್ರಖ್ಯಾತರಾಗಿರುವ ಎಸ್ ಬಾಲಸುಬ್ರಹ್ಮಣ್ಯಂ ಅವರು ನಿಧನರಾಗಿದ್ದಾರೆ.
ಮೃದಂಗ, ತಬಲಾ, ಢೋಲಕ್ , ಢೋಲ್ಕಿ, ಖಂಜರಿ, ಕೋಲ್ ಹೀಗೆ ಹತ್ತು ಹಲವು ಲಯವಾದ್ಯಗಳನ್ನು ನುಡಿಸುವಲ್ಲಿ ಪರಿಣಿತರಾಗಿದ್ದ ವಿದ್ವಾಂಸ ಎಸ್ ಬಾಲಸುಬ್ರಹ್ಮಣ್ಯಂ ಅವರಿಗೆ 71 ವರ್ಷವಾಗಿತ್ತು.
ಕನ್ನಡ ಚಿತ್ರರಂಗದ ಅನೇಕ ಸಂಗೀತ ಸಾಧಕರು ಬಾಲಿ ಅವರನ್ನು ರಿದಂ ಕಿಂಗ್ ಎಂದೇ ಕರೆಯುತ್ತಿದ್ದರು. ಸುಗಮ ಸಂಗೀತದಲ್ಲೂ ಇವರು ಮಾಸ್ಟರ್, ದಕ್ಷಿಣ ಭಾರತದ ಏಕೈಕ ರಿದಂ ಕಂಪೋಸರ್, ಆಯೋಜಕರು ಮತ್ತು ನಿರ್ದೇಶಕರು ಎಂಬ ಹೆಗ್ಗಳಿಗೆ ಇವರದು.
ತಂದೆ ಬಯಾಲಜಿ ಸುಂದರೇಶನ್ ಎಂದೇ ಖ್ಯಾತರಾಗಿದ್ದ ಎಂ.ವಿ. ಸುಂದರೇಶನ್ ಮತ್ತು ಸಾವಿತ್ರಿ ದಂಪತಿಯ ಮಗನಾಗಿ 1953ರ ಜನವರಿ 9ರಂದು ಬೆಂಗಳೂರಿನಲ್ಲಿ ಬಾಲಿ ಅವರು ಜನಿಸಿದರು. ಮನೆಯಲ್ಲಿ ಸಂಗೀತದ ವಾತಾವರಣವಿತ್ತು. ಚಿಕ್ಕಂದಿನಿಂದಲೇ ಸಂಗೀತದತ್ತ ಒಲವು ಮೂಡಿಸಿಕೊಂಡ ಬಾಲಿ ಪಾಲಕ್ಕಾಡು ಶ್ರೀ ರವೀಂದ್ರನಾಥ ವಾರಿಯರ್ ಬಳಿ ಮೃದಂಗ ಕಲಿತರು. ಮುಂದೆ ಅವರು ಹಲವಾರು ಶಾಸ್ತ್ರೀಯ ಸಂಗೀತಗಾರರಿಗೆ ಮೃದಂಗ ಪಕ್ಕವಾದ್ಯ ಸಹಕಾರದಲ್ಲಿ ಬಾಗಿಯಾಗಿದ್ದಾರೆ.