ಹಲವಾರು ಬಾರಿ ಮರು ಚಿತ್ರೀಕರಣ, ಮತ್ತೆ ಮತ್ತೆ ತಿದ್ದುಪಡಿಗಳು, ಹಲವಾರು ಬದಲಾವಣೆಗಳೊಂದಿಗೆ ಕ್ರೇಜ್ ಹುಟ್ಟುಹಾಕುತ್ತಿರುವ ಸುಧೀರ್ ಅತ್ತಾವರ ನಿರ್ದೇಶನದ ಕೊರಗಜ್ಜ ಸಿನಿಮಾದ ಸಂಗೀತವನ್ನೇ ಸಂಪೂರ್ಣವಾಗಿ ಬದಲಾಯಿಸಿ, ದಕ್ಷಿಣ ಭಾರತದ ಪ್ರಖ್ಯಾತ ಸಂಗೀತ ನಿರ್ದೇಶಕ “ಗೋಪಿ ಸುಂದರ್” ಈಗ ಸಿನಿಮಾಗೆ ಬ್ಯಾಗ್ರೌಂಡ್ ಸ್ಕೋರ್ ಜೊತೆ ಎಲ್ಲಾ ಹಾಡುಗಳನ್ನು ಮತ್ತೆ ಹೊಸದಾಗಿ ಕಂಪೋಜ್ ಮಾಡುತ್ತಿದ್ದಾರೆ.
ಬಹುಕೋಟಿ ವೆಚ್ಚದಲ್ಲಿ ತ್ರಿವಿಕ್ರಮ ಸಪಲ್ಯ ರವರು ತ್ರಿವಿಕ್ರಮ ಸಿನೆಮಾಸ್ ಮತ್ತು ಸಕ್ಸಸ್ ಫಿಲಂಸ್ ಬ್ಯಾನರ್ ನ ಅಡಿ ನಿರ್ಮಿಸುತ್ತಿರುವ ಪ್ಯಾನ್ ಇಂಡಿಯಾ ಚಿತ್ರ “ಕೊರಗಜ್ಜ” ಚಿತ್ರಕ್ಕೆ RRR, ಪುಷ್ಪ ಮೊದಲಾದ ಹಿಟ್ ಸಿನಿಮಾಗಳ ತಂತ್ರಜ್ಞರ ದಂಡು ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ತೊಡಗಿಸಿಕೊಂಡಿದೆ.
ಸುಮಾರು ಎಂಟು ನೂರು ವರ್ಷಗಳ ಹಿಂದಿನ ಕಥೆಯುಳ್ಳ ಈ ಸಿನಿಮಾದಲ್ಲಿ ಹಾಲಿವುಡ್- ಬಾಲಿವುಡ್ ಕಲಾವಿದರಾದ ಕಬೀರ್ ಬೇಡಿ, ಸಂದೀಪ್ ಸೋಪರ್ಕರ್, ಗಣೇಶ್ ಆಚಾರ್ಯ ಜೊತೆ ಶ್ರುತಿ, ಭವ್ಯ ಮೊದಲಾದವರು ಅಭಿನಯಿಸುತ್ತಿದ್ದಾರೆ. ಋತಿಕ ಎನ್ನುವ ಹೊಸ ಮುಖ ಕೊರಗಜ್ಜನ ತಾಯಿ ಕೊರೊಪೊಳು ಪಾತ್ರದ ಮುಖಾಂತರ ಕನ್ನಡ ಚಿತ್ರರಂಗಕ್ಕೆ ಪರಿಚಯ ವಾಗುತ್ತಿದ್ದಾರೆ.
ಉಳಿದಂತೆ ಜೀತ್ ಜೊಸ್ಸಿ ಮತ್ತು ವಿದ್ಯಾಧರ್ ಶೆಟ್ಟಿ ಸಂಕಲನ, ಮನೋಜ್ ಪಿಳ್ಳೈ ಮತ್ತು ಪವನ್ ವಿ ಛಾಯಾಗ್ರಹಣ, ಸುಧೀರ್ ಅತ್ತಾವರ್ ಕಲಾ ನಿರ್ದೇಶನ, ಬಿಬಿನ್ ದೇವ್ ಸೌಂಡ್ ಡಿಸೈನಿಂಗ್ ಚಿತ್ರಕ್ಕಿದೆ. ಮಾರ್ಚ್ ಕೊನೆಗೆ ಸಿನಿಮಾ ಬಿಡುಗಡೆಗಾಗಿ ತಯಾರಿ ನಡೆದಿದೆ.