ವಿಶ್ವಕಪ್ ಟೂರ್ನಿಯ ಲೀಗ್ ಹಂತದಲ್ಲಿ ಅಮೋಘ ಪ್ರದರ್ಶನ ತೋರಿದ್ದ ದಕ್ಷಿಣ ಆಫ್ರಿಕಾ ತಂಡ ಸೆಮಿಫೈನಲ್ ಪಂದ್ಯದಲ್ಲಿ ಮುಗ್ಗರಿಸಿತು. ಆ ಮೂಲಕ ತಮ್ಮ ಬೆನ್ನೇರಿರುವ ‘ಚೋಕರ್ಸ್’ ಪಟ್ಟ ಕಳಚಿಕೊಳ್ಳುವಲ್ಲಿ ವಿಫಲವಾಯಿತು.
ಮೊದಲು ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ, ಎಂದಿನ ಲಯದಲ್ಲಿ ರನ್ ಗಳಿಸಲು ವಿಫಲವಾಯಿತು. ಸಾಹಸಮಯ ಶತಕ (101 ರನ್) ಸಿಡಿಸಿದ ಡೇವಿಡ್ ಮಿಲ್ಲರ್, ಹೆನ್ರಿಚ್ ಕ್ಲಾಸೆನ್ (47) ಬಿಟ್ಟರೆ ಉಳಿದವರು ಸಾಮರ್ಥ್ಯಕ್ಕೆ ತಕ್ಕ ಆಟವಾಡಲಿಲ್ಲ. ಹೀಗಾಗಿ 49.4 ಓವರ್ಗಳಲ್ಲಿ 212 ರನ್ ಗಳಿಸಿ ಆಲೌಟ್ ಆಯಿತು.
ಸಾಧಾರಣ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ 47.2 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 215 ರನ್ ಗಳಿಸಿ 8ನೇ ಬಾರಿ ಫೈನಲ್ಗೆ ಲಗ್ಗೆ ಇಟ್ಟಿತು.
ದಕ್ಷಿಣ ಆಫ್ರಿಕಾ ತಂಡಕ್ಕೆ ಸೆಮಿಫೈನಲ್ನಲ್ಲಿ ಎದುರಾದ 5ನೇ ಸೋಲು ಇದು. ಈ ಹಿಂದೆ 1992, 1999, 2007 ಹಾಗೂ 2015ರ ಸೆಮಿಫೈನಲ್ಗಳಲ್ಲಿ ಸೋಲು ಎದುರಾಗಿತ್ತು.
ವಿಶ್ವಕಪ್ನ ಲೀಗ್ ಹಂತದಲ್ಲಿ ಅದ್ಭುತ ಪ್ರದರ್ಶನ ತೋರುವ ಈ ತಂಡ ಪದೇ ಪದೆ ನಾಕೌಟ್ ಪಂದ್ಯಗಳಲ್ಲಿ ಎಡವುತ್ತಿರುವ ಕಾರಣ, ಚೋಕರ್ಸ್ ಪಟ್ಟ ಕಟ್ಟಿಕೊಂಡಿದೆ. ಅದಕ್ಕೆ ತಕ್ಕಂತೆಯೇ ಈ ಬಾರಿಯೂ ಆಡಿತು.
ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡ ಎನಿಸಿಕೊಂಡಿದ್ದ ಆಫ್ರಿಕಾ, ಲೀಗ್ ಹಂತದಲ್ಲಿ ರನ್ ಹೊಳೆ ಹರಿಸಿತ್ತು. ಲೀಗ್ನಲ್ಲಿ ಗೆದ್ದ 7 ಪಂದ್ಯಗಳ ಪೈಕಿ 5ರಲ್ಲಿ ನೂರಕ್ಕಿಂತ ಹೆಚ್ಚು ರನ್ ಅಂತರದಲ್ಲಿ ಜಯ ಸಾಧಿಸಿತ್ತು. ಇನ್ನೆರಡು ಗೆಲುವುಗಳನ್ನು ಗುರಿ ಬೆನ್ನತ್ತಿ ದಕ್ಕಿಸಿಕೊಂಡಿತ್ತು. ಹೀಗಾಗಿ ತೆಂಬಾ ಬವುಮಾ ಬಳಗ ಸಾಕಷ್ಟು ನಿರೀಕ್ಷೆಗಳನ್ನು ಸೃಷ್ಟಿಸಿತ್ತು.
ಆದರೆ ಮಹತ್ವದ ಪಂದ್ಯದಲ್ಲಿ ವೈಫಲ್ಯ ಅನುಭವಿಸಿತು.