ವಾಷಿಂಗ್ಟನ್: ಫೇಸ್ಬುಕ್ನ ಒಡೆತನ ಹೊಂದಿರುವ ಮೆಟಾ ಕಂಪನಿ ಹೊಸ ಉತ್ಪನ್ನವನ್ನು ಬಿಡುಗಡೆ ಮಾಡಿದೆ. ‘ರೇಬಾನ್ ಮೆಟಾ ಸ್ಮಾರ್ಟ್ ಗ್ಲಾಸ್’ ಹೆಸರಿನ ಈ ಕನ್ನಡಕವನ್ನು ಧರಿಸಿ ನೋಡಿದ್ದನ್ನೆಲ್ಲ ಫೇಸ್ಬುಕ್ನಲ್ಲಿ ಲೈವ್ ಮಾಡಬಹುದು. ಅಲ್ಲದೇ ಬೇಕೆನಿಸಿದ ಫೋಟೋವನ್ನೂ ಕ್ಲಿಕ್ಕಿಸಬಹುದು. ಇತ್ತೀಚಿಗೆ ಕೃತಕ ಬುದ್ಧಿಮತ್ತೆ ತಂತ್ರಜ್ಞಾನವು (ಎಐ) ಸರ್ವಾಂತರ್ಯಾಮಿ ಎನಿಸಿದೆ.
ಗೂಗಲ್ ಮತ್ತು ಮೈಕ್ರೋಸಾಫ್ಟ್ ಕಂಪನಿಗಳು ಈ ತಂತ್ರಜ್ಞಾನದಲ್ಲಿ ಭಾರೀ ಹೂಡಿಕೆ ಮಾಡುತ್ತಿವೆ. ಈ ಓಟದಲ್ಲಿ ಫೇಸ್ಬುಕ್ ಒಡೆತನ ಹೊಂದಿರುವ ಮೆಟಾ ಸ್ವಲ್ಪ ಹಿಂದುಳಿದಿದೆ. ಆದರೆ ಮೆಟಾ ತನ್ನದೇ ಆದ ಎಐ ಅಸಿಸ್ಟೆಂಟ್ ಅನ್ನು ಅಭಿವೃದ್ಧಿಪಡಿಸುತ್ತಿದ್ದು, ಇದಕ್ಕೆ ಮೆಟಾ ಎಐ ಎಂದೇ ಹೆಸರಿಡಲಾಗಿದೆ. ಮೆಟಾ ಎಐ ಬಳಸಿ ನೂತನ ಸ್ಮಾರ್ಟ್ ಗ್ಲಾಸ್ ಅಭಿವೃದ್ಧಿಪಡಿಸಲಾಗಿದೆ.
- ಮೆಟಾದ ಮೊದಲ ಸ್ಮಾರ್ಟ್ ಗ್ಲಾಸ್ ಇದಾಗಿದ್ದು, ತುಂಬಾ ಹಗುರ ಮತ್ತು ಆರಾಮದಾಯಕವಾಗಿದೆ. ಇವುಗಳನ್ನು ಮುಂದಿನ ಪೀಳಿಗೆಯ ಸ್ಮಾರ್ಟ್ ಗ್ಲಾಸ್ ಎಂದೂ ವಿವರಿಸಲಾಗಿದೆ.
- ಸ್ಮಾರ್ಟ್ ಗ್ಲಾಸ್ಗಳನ್ನು ಧರಿಸಿ ನೀವು ನೋಡುವ ಎಲ್ಲವನ್ನೂ ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಮ್ನಲ್ಲಿ ಲೈವ್ ಸ್ಟ್ರೀಮ್ ಮಾಡಬಹುದು.
- ಇದರಲ್ಲಿ 12 ಮೆಗಾ ಪಿಕ್ಸೆಲ್ ಅಲ್ಟ್ರಾ ವೈಡ್ ಕ್ಯಾಮೆರಾವನ್ನು ಬಳಸಲಾಗಿದೆ. ಈ ಸ್ಮಾರ್ಟ್ ಗ್ಲಾಸ್ ಬಳಸಿ ಫೋಟೋಗಳನ್ನು ತೆಗೆಯಬಹುದು. ವಿಡಿಯೋಗಳನ್ನು ರೆಕಾರ್ಡ್ ಮಾಡಬಹುದು.
- ‘Qualcomm Snapdragon AR 1′ ಪ್ಲಾಟ್ಫಾರ್ಮ್ ಬಳಕೆಯಿಂದಾಗಿ, ಫೋಟೋಗಳು ಮತ್ತು ವೀಡಿಯೊಗಳು ಉತ್ತಮ ಸ್ಪಷ್ಟತೆಯೊಂದಿಗೆ ಬರುತ್ತವೆ.
- ಈ ಸ್ಮಾರ್ಟ್ ಗ್ಲಾಸ್ಗಳು ಚಾರ್ಜಿಂಗ್ ಕೇಸ್ನೊಂದಿಗೆ ಬರುತ್ತವೆ. ಒಂದೇ ಚಾರ್ಜ್ನಲ್ಲಿ 36 ಗಂಟೆಗಳವರೆಗೆ ಬಳಸಬಹುದು.
ಸಂಗೀತ–ಸಂವಹನಕ್ಕೂ ಸೈ
ಈ ಸ್ಮಾರ್ಟ್ ಗ್ಲಾಸ್ ಮೂಲಕ ನೀವು WhatsApp, Messengerನಲ್ಲಿ ಇತರರೊಂದಿಗೆ ಸಂವಹನ ನಡೆಸಬಹುದು. ಬ್ರೌಸಿಂಗ್ ಕೂಡ ಮಾಡಬಹುದು. Meta AI ಅಸಿಸ್ಟೆಂಟ್ ನಿಮಗೆ ಅಗತ್ಯವಿರುವ ಸಹಾಯವನ್ನು ನೀಡುತ್ತದೆ.
ಮೆಟಾ ಎಐನಿಂದ ಸಹಾಯ ಪಡೆಯಲು ‘ಹೇ ಮೆಟಾ’ ಎಂದರೆ ಸಾಕು. ನಿಮ್ಮ ಧ್ವನಿಯ ಮೂಲಕ ಸಂವಹನವನ್ನು ಮುಂದುವರಿಸಬಹುದು. ನಿಮ್ಮ ಪ್ರಶ್ನೆಗಳಿಗೆ ಉತ್ತರ ಪಡೆಯಬಹುದು.
ಬೆಲೆ ಕೇವಲ 24,500 ರೂಪಾಯಿ!
ಮೆಟಾ ಈ ಸ್ಮಾರ್ಟ್ ಗ್ಲಾಸ್ಗಳಿಗೆ ಮುಂಗಡ-ಆರ್ಡರ್ಗಳನ್ನು ಸಹ ಪ್ರಾರಂಭಿಸಿದೆ. ಬೆಲೆಯನ್ನು 299 ಡಾಲರ್ಗಳಿಗೆ ನಿಗದಿಪಡಿಸಲಾಗಿದೆ. ಭಾರತದ ಕರೆನ್ಸಿಯಲ್ಲಿ ಇದು ಸುಮಾರು 24,500 ರೂ.ಗೆ ಲಭ್ಯವಿದೆ. ಸದ್ಯಕ್ಕೆ ಈ ಸ್ಮಾರ್ಟ್ ಗ್ಲಾಸ್ಗಳು ಅಮೆರಿಕದಲ್ಲಿ ಮಾತ್ರ ಲಭ್ಯವಾಗುತ್ತಿದ್ದು, ಮುಂದಿನ ದಿನಗಳಲ್ಲಿ ಜಾಗತಿಕ ಮಟ್ಟದಲ್ಲಿ ತರುವುದಾಗಿ ಮೆಟಾ ತಿಳಿಸಿದೆ.