ಗ್ರಮಾಡೊ (ಬ್ರೆಝಿಲ್): ದಕ್ಷಿಣ ಬ್ರೆಝಿಲ್ ನ ಪ್ರವಾಸಿ ನಗರವಾದ ಗ್ರಮಾಡೊ ನಗರದ ಕೇಂದ್ರ ಭಾಗದಲ್ಲಿರುವ ಮಳಿಗೆಯ ಮೇಲೆ ಸಣ್ಣ ವಿಮಾನವೊಂದು ಪತನಗೊಂಡ ಪರಿಣಾಮ ವಿಮಾನದಲ್ಲಿದ್ದ 10 ಮಂದಿ ಮೃತಪಟ್ಟಿದ್ದಾರೆ. ಪ್ರಾಥಮಿಕ ವರದಿಗಳ ಪ್ರಕಾರ, ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಯಾರೂ ಬದುಕುಳಿದಿಲ್ಲ ಎನ್ನಲಾಗುತ್ತಿದೆ.
ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಗವರ್ನರ್ ಎಡ್ವರ್ಡೊ ಲೈಟ್, “ದುರದೃಷ್ಟವಶಾತ್, ಪ್ರಾಥಮಿಕ ವರದಿಗಳ ಪ್ರಕಾರ, ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಯಾರೊಬ್ಬರೂ ಬದುಕುಳಿದಿಲ್ಲ” ಎಂದು ತಿಳಿಸಿದ್ದಾರೆ.
ರಿಯೊ ಗ್ರಾಂಡೆ ಡೊ ಸುಲ್ ರಾಜ್ಯದ ಸಾರ್ವಜನಿಕ ಭದ್ರತಾಧಿಕಾರಿಯ ಪ್ರಕಾರ, ಕನಿಷ್ಠ ಪಕ್ಷ 15 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರೆಲ್ಲ ವಿಮಾನ ಪತನದಿಂದ ಹೊತ್ತಿಕೊಂಡ ಬೆಂಕಿಯ ಹೊಗೆಯಿಂದ ಉಸಿರಾಟದ ತೊಂದರೆಗೊಳಗಾಗಿದ್ದಾರೆ ಎಂದು ಹೇಳಲಾಗಿದೆ.
ವಿಮಾನವು ಮೊದಲು ಕಟ್ಟಡವೊಂದರ ಚಿಮಣಿಗೆ ಢಿಕ್ಕಿ ಹೊಡೆದಿದ್ದು, ನಂತರ, ಮನೆಯೊಂದರ ಎರಡನೆ ಅಂತಸ್ತಿಗೆ ಅಪ್ಪಳಿಸಿ, ತದನಂತರ ಪೀಠೋಪಕರಣಗಳ ಮಳಿಗೆಗೆ ನುಗ್ಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.