ನವದೆಹಲಿ:- ಒಂದೇ ಭಾರತ್ ರೈಲುಗಳ ಟೆಂಡರ್ ರದ್ದಾಗಿದೆ.
ನೂರು ವಂದೇ ಭಾರತ್ ರೈಲುಗಳ ತಯಾರಿಕೆ ಮತ್ತು ನಿರ್ವಹಣೆಗೆ ಕಳೆದ ವರ್ಷ ಕರೆಯಲಾಗಿದ್ದ 30,000 ಕೋಟಿ ರೂ ಮೊತ್ತದ ಟೆಂಡರ್ ಅನ್ನು ಭಾರತೀಯ ರೈಲ್ವೇಸ್ ರದ್ದುಗೊಳಿಸಿದೆ. ಟೆಂಡರ್ನಲ್ಲಿ ಭಾಗಿಯಾಗಿದ್ದ ಎರಡು ಕಂಪನಿಗಳಲ್ಲಿ ಅತಿಕಡಿಮೆಗೆ ಬಿಡ್ ಮಾಡಿದ್ದು ಫ್ರಾನ್ಸ್ ಮೂಲದ ಆಲ್ಸ್ಟಾಮ್ ಇಂಡಿಯಾ ಸಂಸ್ಥೆ. ಟೆಂಡರ್ ರದ್ದುಗೊಳಿಸಲಾಗಿರುವುದನ್ನು ಈ ಫ್ರೆಂಚ್ ಸಂಸ್ಥೆಯ ಎಂಡಿ ಓಲಿವಿಯರ್ ಲೋಯ್ಸನ್ ಹೇಳಿದ್ದಾರೆ.
2023ರ ಮೇ 30ರಂದು ಅಲೂಮಿನಿಯಮ್ನಿಂದ 100 ವಂದೇ ಭಾರತ್ ರೈಲುಗಳನ್ನು ತಯಾರಿಸಲು ಟೆಂಡರ್ ಕರೆಯಲಾಗಿತ್ತು. ಐದಾರು ಕಂಪನಿಗಳು ಆಸಕ್ತಿ ತೋರಿದವರಾದರೂ ತಾಂತ್ರಿಕ ಅರ್ಹತೆ ಗಿಟ್ಟಿಸಲು ಹೆಚ್ಚಿನವು ವಿಫಲವಾಗಿದ್ದವು. ಅಂತಿಮವಾಗಿ ಫ್ರಾನ್ಸ್ನ ಆಲ್ಸ್ಟೋಮ್ ಇಂಡಿಯಾ ಮತ್ತು ಸ್ವಿಟ್ಜರ್ಲ್ಯಾಂಡ್ ಮೂಲದ ಸ್ಟಾಡ್ಲರ್ ರೈಲ್ ಸಂಸ್ಥೆ ಮಾತ್ರವೆ ಬಿಡ್ ಸಲ್ಲಿಸಿದ್ದು. ಹೈದರಾಬಾದ್ನ ಮೇಧಾ ಸರ್ವೋ ಡ್ರೈವ್ಸ್ ಮತ್ತು ಸ್ಟಾಡ್ಲರ್ ರೈಲ್ ಜಂಟಿಯಾಗಿ ಬಿಡ್ ಸಲ್ಲಿಸಿದ್ದವು. ಫ್ರೆಂಚ್ ಕಂಪನಿ ಒಂದು ರೈಲಿಗೆ 150.9 ಕೋಟಿ ರೂ ಬೆಲೆ ಪಟ್ಟಿ ಕೊಟ್ಟಿತ್ತು. ಸ್ವಿಸ್ ಕಂಪನಿ ನಿಗದಿ ಮಾಡಿದ ಬೆಲೆ 170 ರೂ ಆಗಿತ್ತು.
ಆದರೆ, ರೈಲ್ವೆ ಇಲಾಖೆ ಒಂದು ರೈಲಿಗೆ 140 ಕೋಟಿ ರೂನಂತೆ ಗುತ್ತಿಗೆ ಪಡೆಯುವ ಗುರಿ ಹೊಂದಿದೆ. ಎರಡು ಬಿಡ್ಗಳಲ್ಲಿ ಅತಿಕಡಿಮೆ ಬೆಲೆ 150 ರೂ ಆಗಿತ್ತು. ಇದು ದುಬಾರಿ ಎನಿಸಿದ್ದರಿಂದ ರೈಲ್ವೆ ಇಲಾಖೆ ಟೆಂಡರ್ ಅನ್ನು ರದ್ದುಗೊಳಿಸಲು ನಿರ್ಧರಿಸಿತು ಎನ್ನಲಾಗಿದೆ.