ತಮ್ಮ ಹಾಡಿನ ಮೂಲಕ ಕೋಟ್ಯಾಂತರ ಕೇಳುಗರ ಮನಸ್ಸು ಗೆದ್ದ ಗಾಯಕ ದಿಲ್ಜೀತ್ ದೊಸಾಂಜ್ ಇದೀಗ ಪ್ರಧಾನಿ ಮೋದಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಹಲವು ದೇಶಗಳಲ್ಲಿ ಸಂಗೀತ ಕಾರ್ಯಕ್ರಮ ನೀಡಿ ಗಮನ ಸೆಳೆದಿರುವ ದಿಲ್ ಜೀತ್ ದೊಸಾಂಜ್ ಕೆಲ ಸಿನಿಮಾಗಳಲ್ಲಿ ನಟಿಸುವ ಮೂಲಕವೂ ಹೆಸರು ಮಾಡಿದ್ದಾರೆ. ದಿಲ್ ಜೀತ್ ಹಾಗೂ ಪ್ರಧಾನಿ ಭೇಟಿಯಾಗಿರುವ ವಿಡಿಯೋವನ್ನು ದಿಲ್ಜೀತ್ ದೊಸಾಂಜ್ ಹಾಗೂ ನರೇಂದ್ರ ಮೋದಿ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
‘ಇದು ತುಂಬ ಸ್ಮರಣೀಯ ಮಾತುಕಥೆ. ಈ ಭೇಟಿಯ ಹೈಲೈಟ್ಸ್ ಇಲ್ಲಿದೆ’ ಎಂಬ ಕ್ಯಾಪ್ಷನ್ನೊಂದಿಗೆ ನರೇಂದ್ರ ಮೋದಿ ಅವರು ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಪೋಸ್ಟ್ ಮಾಡಿದ್ದಾರೆ. ‘ಭಾರತದ ಓರ್ವ ಹಳ್ಳಿ ಹುಡುಗ ಪ್ರಪಂಚದಲ್ಲಿ ಹೆಸರು ಮಾಡುತ್ತಾನೆ ಎಂದಾಗ ತುಂಬ ಖುಷಿ ಆಗುತ್ತದೆ’ ಎಂದು ಪ್ರಧಾನಿ ಮೋದಿ ಅವರು ದಿಲ್ಜೀತ್ ಅವರನ್ನು ಹೊಗಳಿದ್ದಾರೆ.
‘ನಿಮ್ಮ ಕುಟುಂಬದವರು ನಿಮಗೆ ದಿಲ್ಜೀತ್ (ಹೃದಯ ಗೆದ್ದವ) ಎಂದು ಹೆಸರು ಇಟ್ಟರು. ನೀವು ಜನರ ಹೃದಯವನ್ನು ಗೆಲ್ಲುತ್ತಲೇ ಸಾಗುತ್ತಿದ್ದೀರಿ’ ಎಂದು ಕೂಡ ಗಾಯಕನ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಮೋದಿ ಮಾತಿಗೆ ದಿಲ್ಜೀತ್ ಧನ್ಯವಾದ ಹೇಳಿದ್ದಾರೆ.
‘ಮೇರಾ ಭಾರತ್ ಮಹಾನ್ ಅಂತ ನಾವು ಪುಸ್ತಕದಲ್ಲಿ ಓದುತ್ತಿದ್ದೆವು. ನಾನು ಪೂರ್ತಿ ದೇಶ ಸಂಚರಿಸಿದ ಬಳಿಕ ಯಾಕೆ ಮೇರಾ ಭಾರತ್ ಮಹಾನ್ ಎನ್ನುತ್ತಾರೆ ಅಂತ ನನಗೆ ತಿಳಿಯಿತು’ ಎಂದು ದಿಲ್ಜೀತ್ ದೊಸಾಂಜ್ ಹೇಳಿದ್ದಾರೆ. ‘ಭಾರತದ ವಿವಿಧ್ಯತೆಯೇ ನಮ್ಮ ಶಕ್ತಿ. ಯೋಗದ ಅನುಭವ ಪಡೆದವರು ಅದರ ಶಕ್ತಿ ಅರಿಯುತ್ತಾರೆ’ ಎಂದು ಮೋದಿ ಹೇಳಿದ್ದಾರೆ. ಮೋದಿಯವರ ಕೆಲಸವನ್ನು ದಿಲ್ಜೀತ್ ದೊಸಾಂಜ್ ಅವರು ಶ್ಲಾಘಿಸಿದ್ದಾರೆ.
ಈ ಭೇಟಿಯ ವೇಳೆ ಗುರುನಾನಕ್ ಗೀತೆಯನ್ನು ದಿಲ್ಜೀತ್ ಹಾಡಿದ್ದಾರೆ. ಹೊಸ ವರ್ಷದ ಸಂದರ್ಭದಲ್ಲಿ ಮೋದಿ ಅವರನ್ನು ದಿಲ್ಜೀತ್ ಭೇಟಿಯಾಗಿದ್ದು ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.