ಧಾರವಾಡ : ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತ್ರಿ ಕಾನೂನು ಜಾರಿಗೊಳಿಸುವುದು ಸೇರಿ ರೈತರ ವಿವಿಧ ಬೇಡಿಕೆ ಈಡೇರಿಸಲು ಒತ್ತಾಯಿಸಿ ರೈತ ನಾಯಕ ಜಗಜೀತ್ ಸಿಂಗ್ ಡಲ್ಲೇವಾಲ್ ಕೈಗೊಂಡ ಉಪವಾಸ ಸತ್ಯಾಗ್ರಹ 100 ದಿನ ಪೂರೈಸಿದೆ. ಆದರೆ ಈ ಬಗ್ಗೆ ಕೇಂದ್ರ ಸರ್ಕಾರ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿ ಜಿಲ್ಲಾ ಕಬ್ಬು ಬೆಳೆಗಾರರ ಸಂಘಟನೆಯಿಂದ ಮೌನ ಪ್ರತಿಭಟನೆ ನಡೆಸಲಾಯಿತು.
ಬುಧವಾರದಂದು ಕಲಘಟಗಿ ಪಟ್ಟಣದ ತಹಶೀಲ್ದಾರ್ ಕಚೇರಿ ಎದುರು ನಾಲ್ಕು ತಾಸು ಧರಣಿ ನಡೆಸಿ, ಗ್ರೇಡ್ 2 ತಹಶೀಲ್ದಾರ್ ಬಸವರಾಜ ಹೊಂಕನ್ನದವರ ಅವರಿಗೆ ಮನವಿ ಸಲ್ಲಿಸಿದರು. ರೈತರ ಸಾಲ ಮನ್ನಾ, ಸ್ವಾಮಿನಾಥನ್ ವರದಿ ಜಾರಿ, 60 ವರ್ಷ ತುಂಬಿದ ರೈತರಿಗೆ ಪಿಂಚಣಿ ಯೋಜನೆ, ಕಬ್ಬಿನ ಎಫ್ಆರ್ಪಿ ಹೆಚ್ಚಿಸುವುದು, ಕೃಷಿ ಸಾಲಕ್ಕೆ ಸಿಬಿಲ್ ಸ್ಕೋರ್ ಕೈಬಿಡುವುದು, ಕೃಷಿ ಸಾಲ ನಿಯಮ ಬದಲಾಯಿಸುವುದು ಮತ್ತಿತರ ಬೇಡಿಕೆ ಈಡೇರಿಸಲು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ದಕ್ಷಿಣ ಭಾರತದ ತಮಿಳುನಾಡು, ಕೇರಳ, ತೆಲಂಗಾಣ ಹಾಗೂ ವಿವಿಧ ರಾಜ್ಯಗಳ ರೈತ ಮುಖಂಡರು ಕೇಂದ್ರ ಸರ್ಕಾರದ ನೀತಿ ವಿರುದ್ಧ ಬೇಸರ ವ್ಯಕ್ತ ಪಡಿಸಿದ್ದಾರೆ. ಮಾರ್ಚ್ 19ರಂದು ನಿಗದಿಯಾದ ಸಭೆಯಲ್ಲಿ ರೈತರ ಸಮಸ್ಯೆ ಬಗೆಹರಿಯಬೇಕು, ಇಲ್ಲದಿದ್ದರೆ ಡಲ್ಲೇವಾಲ್ ಅವರ ಜೀವಕ್ಕೆ ಅಪಾಯ ಎದುರಾದರೆ ಕೇಂದ್ರ ಸರ್ಕಾರವೇ ಹೊಣೆ ಹೊರಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಕಬ್ಬು ಬೆಳೆಗರಾರ ಸಂಘದ ಜಿಲ್ಲಾ ಅಧ್ಯಕ್ಷ ಮಹೇಶ ಬೆಳಗಾತ್ಕರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪರಶುರಾಮ ಎತ್ತಿನಗುಡ್ಡ, ಉಪಾಧ್ಯಕ್ಷ ಉಳವಪ್ಪ ಬಳಿಗೇರ, ಬಸನಗೌಡ ಸಿದ್ದನಗೌಡ, ನಾಗೇಶ ಇಟಗಿ, ಶಿವು ತಡಸ, ಜ್ಯೋತಿಬಾ ಹುಲಕೊಪ್ಪ, ನಿಂಗಪ್ಪ ತಡಸ ಭಾಗಿಯಾಗಿದ್ದರು.