ಬೆಂಗಳೂರು: ಜಮ್ಮು ಮತ್ತು ಕಾಶ್ಮೀರದ (Jammu and Kashmir) ಗಡಿ ಜಿಲ್ಲೆಯ ರಜೌರಿಯಲ್ಲಿ ಬುಧವಾರ ಭಯೋತ್ಪಾದಕರ ವಿರುದ್ಧ ನಡೆಯುತ್ತಿರುವ ಎನ್ಕೌಂಟರ್ನಲ್ಲಿ ಇಬ್ಬರು ಅಧಿಕಾರಿಗಳು ಸೇರಿದಂತೆ ನಾಲ್ವರು ಸೇನಾ ಯೋಧರು ಹುತಾತ್ಮರಾಗಿದ್ದಾರೆ. ಹುತಾತ್ಮರಾದ ನಾಲ್ವರಲ್ಲಿ 63 ರಾಷ್ಟ್ರೀಯ ರೈಫಲ್ಸ್ನ ಕ್ಯಾಪ್ಟನ್ ಎಂ.ವಿ.ಪ್ರಾಂಜಲ್ (MV Pranjal) ಸೇರಿದ್ದಾರೆ.
ಹುತಾತ್ಮ ಯೋಧ (Soldier) ಪ್ರಾಂಜಲ್ ಕುಟುಂಬದಲ್ಲಿ ನೀರವ ಮೌನ ಆವರಿಸಿದೆ. ಬಂಧು-ಬಳಗದವರು ನೋವಿನಲ್ಲಿರುವ ತಂದೆ ವೆಂಕಟೇಶ್ ಮತ್ತು ತಾಯಿ ಅನುರಾಧ ಪೋಷಕರಿಗೆ ಸಾಂತ್ವನ ಹೇಳುತ್ತಿದ್ದಾರೆ.
ಸದ್ಯ ಪ್ರಾಂಜಲ್ ಪಾರ್ಥೀವ ಶರೀರ ಜಮ್ಮು ಮತ್ತು ಕಾಶ್ಮೀರದಲ್ಲಿಯೇ ಇದೆ. ಪಾರ್ಥೀವ ಶರೀರವನ್ನು ಬೆಂಗಳೂರಿಗೆ ತರುವ ಬಗ್ಗೆ ಕುಟುಂಬಸ್ಥರಿಗೆ ಇನ್ನೂ ಯಾವುದೇ ಮಾಹಿತಿ ನೀಡಿಲ್ಲ. ಪ್ರಾಂಜಲ್ ಹುತಾತ್ಮನಾದ ವಿಷಯ ತಿಳಿಯುತ್ತಿದ್ದಂತೆ ಕುಟುಂಬಸ್ಥರು ಮತ್ತು ಆಪ್ತರು ಮನೆಯ ಬಳಿ ಜಮಾಯಿಸಿದ್ದಾರೆ.
ಗುರುವಾರ (ನ.23) ಬೆಂಗಳೂರಿಗೆ ಪಾರ್ಥಿವ ಶರೀರ ಬರುವುದು ಬಹುತೇಕ ಅನುಮಾನ, ಶುಕ್ರವಾರ ಮುಂಜಾನೆ ವೇಳೆಗೆ ಬರುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಜಿಗಣಿಯ ನಂದನವನ ಬಡಾವಣೆಯಲ್ಲಿರುವ ಮನೆಯ ಸಮೀಪ ಹುತಾತ್ಮ ಯೋಧ ಪ್ರಾಂಜಲ್ ಅಂತಿಮ ದರ್ಶನಕ್ಕೆ ಸಿದ್ಧತೆ ನಡೆಯುತ್ತಿದೆ. ಮನೆಯ ಮುಂಭಾಗ ಸ್ವಚ್ಛತಾ ಕಾರ್ಯವೂ ನಡೆಯುತ್ತಿದೆ.