ನಟ ಸಿದ್ದಾರ್ಥ್ ಹಾಗೂ ಅದಿತಿ ರಾವ್ ಹೈದರಿ ಗುಟ್ಟಾಗಿ ದೇವಾಲಯದಲ್ಲಿ ವಿವಾಹವಾಗಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಸಿದ್ದಾರ್ಥ್ ಹಾಗೂ ಅದಿತಿ ಕಳೆದ ಕೆಲವು ವರ್ಷಗಳಿಂದಲೂ ಪ್ರೀತಿಯಲ್ಲಿದ್ದರು. ಈ ಜೋಡಿ ಲಿವ್ ಇನ್ ರಿಲೇಷನ್ಶೀಪ್ನಲ್ಲಿದೆ, ಆದಷ್ಟು ಬೇಗ ವಿವಾಹವಾಗಲಿದೆ ಎನ್ನಲಾಗಿತ್ತು. ಅದರಂತೆ ಇದೀಗ ತೆಲಂಗಾಣದ ದೇವಾಲಯವೊಂದರಲ್ಲಿ ಸಿದ್ಧಾರ್ಥ್ ಹಾಗೂ ಅದಿತಿ ರಾವ್ ಹೈದರಿ ಅವರುಗಳು ಗುಟ್ಟಾಗಿ ಮದುವೆಯಾಗಿದ್ದಾರೆ ಎನ್ನಲಾಗುತ್ತಿದ್ದು ಮದುವೆಯ ಕೆಲವು ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ತೆಲಂಗಾಣದ ವಾನಪರ್ತಿ ಜಿಲ್ಲೆಯ ಶ್ರೀರಂಗಾಪುರದಲ್ಲಿನ ರಂಗನಾಯಕ ಸ್ವಾಮಿ ದೇವಾಲಯದಲ್ಲಿ ಬುಧವಾರ ಮುಂಜಾನೆ ಸಿದ್ಧಾರ್ಥ್ ಹಾಗೂ ಅದಿತಿ ರಾವ್ ಹೈದರಿ ಅತ್ಯಂತ ಸರಳವಾಗಿ ವಿವಾಹವಾಗಿದ್ದಾರೆ. ಕೆಲವೇ ಕೆಲವು ಆಪ್ತರು, ಕುಟುಂಬ ಸದಸ್ಯರು ಮಾತ್ರವೇ ಮದುವೆಯಲ್ಲಿ ಹಾಜರಿದ್ದರು ಎನ್ನಲಾಗುತ್ತಿದೆ. ತಮ್ಮ ಮದುವೆ ಕಾರ್ಯಕ್ರಮವನ್ನು ಈ ಜೋಡಿ ಸಾಕಷ್ಟು ಗುಟ್ಟಾಗಿ ಇರಿಸಿದ್ದು ಎಲ್ಲೂ ಮದುವೆಯ ವಿಚಾರ ಪ್ರಸ್ತಾಪ ಮಾಡಿಲ್ಲ.
2021ರಲ್ಲಿ ಬಿಡುಗಡೆ ಆದ ‘ಮಹಾ ಸಮುದ್ರಂ’ ಸಿನಿಮಾದ ಚಿತ್ರೀಕರಣದ ಸಮಯದಲ್ಲಿ ಇವರಿಬ್ಬರು ಪರಸ್ಪರ ಭೇಟಿಯಾಗಿದ್ದರು. ಅಲ್ಲಿಯೇ ಪ್ರೀತಿ ಬೆಳೆದು ಕಳೆದೊಂದು ವರ್ಷದಿಂದಲೂ ಈ ಜೋಡಿ ಲಿವ್ ಇನ್ ರಿಲೇಷನ್ಶಿಪ್ನಲ್ಲಿದ್ದರು. ಇದೀಗ ಇಬ್ಬರೂ ವಿವಾಹವಾಗಿದ್ದಾರೆ ಎನ್ನಲಾಗುತ್ತಿದೆ.
44 ವರ್ಷದ ಸಿದ್ಧಾರ್ಥ್ಗೆ ಇದು ಎರಡನೇ ಮದುವೆ. 2003 ರಲ್ಲಿಯೇ ಸಿದ್ಧಾರ್ಥ್ ತಮ್ಮ ಬಾಲ್ಯದ ಗೆಳತಿ ಮೇಘನಾ ಎಂಬುವರನ್ನು ವಿವಾಹವಾಗಿದ್ದರು. ಆದರೆ 2007 ರಲ್ಲಿ ಇಬ್ಬರು ಪರಸ್ಪರ ವಿಚ್ಛೇದನ ಪಡೆದುಕೊಂಡರು. ಆ ಬಳಿಕ ಸಿದ್ಧಾರ್ಥ್ ಹೆಸರು ಬಾಲಿವುಡ್ ನಟಿ ಸಾರಾ ಅಲಿ ಖಾನ್ ಜೊತೆ ಕೇಳಿ ಬಂದಿತ್ತು. ಸಮಂತಾ ಜೊತೆಗೂ ಕೆಲ ಕಾಲ ಸಿದ್ಧಾರ್ಥ್ ಹೆಸರು ಕೇಳಿ ಬಂದಿತ್ತು. ಇದೀಗ ಅಂತಿಮವಾಗಿ ಅದಿತಿ ಜೊತೆ ವಿವಾಹವಾಗಿದ್ದಾರೆ.
ನಟಿ ಅದಿತಿ ರಾವ್ ಹೈದರಿಗೂ ಇದು ಎರಡನೇ ಮದುವೆ. ಈಶಾನ್ ಹೈದರಿ ಹಾಗೂ ವಿದ್ಯಾ ರಾವ್ ಅವರ ಪುತ್ರಿ ಅದಿತಿ ರಾವ್ ಹೈದರಿ, ಆಮಿರ್ ಖಾನ್ರ ಮಾಜಿ ಪತ್ನಿ ಕಿರಣ್ ರಾವ್ ರ ಹತ್ತಿರದ ಸಂಬಂಧಿ. ಅದಿತಿ ರಾವ್ ಹೈದರಿ ತಮ್ಮ 23ನೇ ವಯಸ್ಸಿನಲ್ಲಿಯೇ ನಟ, ವಕೀಲ ಸತ್ಯದೀಪ್ ಮಿಶ್ರಾ ವಿವಾಹವಾಗಿದ್ದರು. ತಮ್ಮ ಮದುವೆಯನ್ನು ಗುಟ್ಟಾಗಿರಿಸಿದ್ದ ನಟಿ 2013ರಲ್ಲಿ ಬೇರೆ ಬೇರೆಯಾಗಿದ್ದು ಇದೀಗ ಸಿದ್ದಾರ್ಥ್ ಜೊತೆ ಹಸೆಮಣೆ ಏರಿದ್ದಾರೆ.