ಬೆಂಗಳೂರು: ಸಿದ್ದರಾಮಯ್ಯ ಅವರು ಹುಟ್ಟು ಮುಸ್ಲಿಂ ಆಗದಿದ್ರೂ, ಟೋಪಿ ಹಾಕಿದಾಗ ಒರಿಜಿನಲ್ ಮುಸ್ಲಿಂ ಥರ ಕಾಣಿಸ್ತಾರೆ ಎಂದು ಬಿಜೆಪಿ ಮಾಜಿ ಸಚಿವ ಸಿ.ಟಿ.ರವಿ ಟೀಕಾಪ್ರಹಾರ ನಡೆಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ನವರಿಗೆ ಒಲ್ಲದ ಗಂಡನಿಗೆ ಮೊಸರಲ್ಲಿ ಕಲ್ಲು ಹುಡುಕುವ ಗಾದೆ ಸೂಕ್ತ ಆಗುತ್ತೆ ಎನ್ನುವ ಮೂಲಕ, ಅಪೂರ್ಣ ರಾಮಮಂದಿರ ಮೂಲಕ ಬಿಜೆಪಿ ರಾಜಕಾರಣ ಮಾಡ್ತಿದೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಠಕ್ಕರ್ ಕೊಟ್ಟಿದ್ದಾರೆ.
ರಾಮಂದಿರ ದೇವಾಲಯಗಳ ಸಮುಚ್ಛಯ. ಮೊದಲ ಹಂತ ಈಗ ಪೂರ್ಣ ಆಗಿ ರಾಮಲಲ್ಲಾ ಪ್ರತಿಷ್ಠಾಪನೆ ಆಗ್ತಿದೆ ಈಗ. ಹಲವು ಹಂತಗಳಲ್ಲಿ ನಿರ್ಮಾಣ ಆಗಲಿದೆ. ಈ ನಿರ್ಣಯ ಕೈಗೊಂಡಿರೋದು ಟ್ರಸ್ಟ್, ಅದು ಯಾವ ಪಕ್ಷಕ್ಕೂ ಸೇರಿದ ಟ್ರಸ್ಟ್ ಅಲ್ಲ. ಕಾಂಗ್ರೆಸ್ನವರಿಗೆ ಒಲ್ಲದ ಗಂಡನಿಗೆ ಮೊಸರಲ್ಲಿ ಕಲ್ಲು ಹುಡುಕುವ ಗಾದೆ ಸೂಕ್ತ ಆಗುತ್ತೆ. ಮೊದಲು ಆಹ್ವಾನ ಬಂದಿಲ್ಲ ಅಂತಿದ್ರು. ಆಹ್ವಾನ ಬಂದ್ಮೇಲೆ ಬರಲ್ಲ ಅಂತಿದ್ದಾರೆ. ಅವರು ಬರೋದು ರಾಮನ ಇಚ್ಛೆಯೂ ಅಲ್ಲ ಎಂದು ತಿವಿದಿದ್ದಾರೆ.
ಬಿಜೆಪಿಯವರದ್ದು ಢೋಂಗಿ ಹಿಂದುತ್ವ ಎಂಬ ಸಿದ್ದರಾಮಯ್ಯ ಟ್ವೀಟ್ ವಿಚಾರಕ್ಕೆ ಮಾತಾಡಿದ ಸಿ.ಟಿ.ರವಿ, ಸಿದ್ದರಾಮಯ್ಯ ಟೋಪಿ ಮೇಲಿನ ಪ್ರೀತಿ ಕೇಸರಿ ಮೇಲೆ ತೋರಿಸಲ್ಲ. ಟೋಪಿ ಹಾಕ್ಕೊಂಡು ಸೂಟ್ ಆಗುತ್ತಾ ಇಲ್ವಾ ಅಂತಾ ನೋಡಿಕೊಂಡಿದ್ದಾರೆ. ಕೇಸರಿ ಪೇಟಾ ಇಡಲು ಬಂದ್ರೆ ಧಿಕ್ಕರಿಸ್ತಾರೆ. ಸಿದ್ದರಾಮಯ್ಯ ಹುಟ್ಟು ಮುಸ್ಲಿಂ ಆಗದಿದ್ರೂ, ಟೋಪಿ ಹಾಕಿದಾಗ ಒರಿಜಿನಲ್ ಮುಸ್ಲಿಂ ಥರ ಕಾಣಿಸ್ತಾರೆ. ಇದು ಢೋಂಗಿತನ ಎಂದು ಟಾಂಗ್ ಕೊಟ್ಟಿದ್ದಾರೆ.
ಕಾಂಗ್ರೆಸ್ ಸರ್ಕಾರ ಘೋಷಣೆ ಮಾಡಿದ ಗ್ಯಾರಂಟಿಗಳಿಗಿಂತ ಘೋಷಿಸದೇ ಹಲವು ಗ್ಯಾರಂಟಿಗಳನ್ನು ಜಾರಿ ಮಾಡಿದ್ದೇ ಹೆಚ್ಚು. ಏಳು ತಿಂಗಳ ನಂತರ ಐದನೇ ಗ್ಯಾರಂಟಿಗೆ ಇವತ್ತು ಚಾಲನೆ ಕೊಡ್ತಿದಾರೆ. ಅದೂ ಎಲ್ಲ ನಿರುದ್ಯೋಗಿಗಳಿಗೂ ಯುವ ಗ್ಯಾರಂಟಿ ಕೊಡ್ತಿಲ್ಲ. ಮತ್ತಷ್ಟು ಗ್ಯಾರಂಟಿಗಳನ್ನು ಸರ್ಕಾರ ಹೇಳದೇ ಜಾರಿ ಮಾಡಿದೆ. ವಿದ್ಯುತ್ ಬೆಲೆ, ಅಬಕಾರಿ ತೆರಿಗೆ, ಸ್ಟಾಂಪ್ ತೆರಿಗೆ ಹೆಚ್ಚಿಸಿರೋದು ಆರನೇ ಗ್ಯಾರಂಟಿ. ಏಳನೇ ಗ್ಯಾರಂಟಿ ಹಳ್ಳಿಗಳಲ್ಲಿ ವಿದ್ಯುತ್ ಕಡಿತ ಮಾಡಿದ್ದಾರೆ. ಎಂಟನೇ ಗ್ಯಾರಂಟಿ ಅಭಿವೃದ್ಧಿ ಕೆಲಸಗಳ ಸ್ಥಗಿತ. ಒಂಬತ್ತನೇ ಗ್ಯಾರಂಟಿ ಜಾತಿ ಜಾತಿಗಳ ನಡುವೆ ಎತ್ತಿ ಕಟ್ಟುತ್ತಿರುವುದು. ವರ್ಗಾವಣೆಗೆ ದರ ಪಟ್ಟಿ ಹನ್ನೊಂದನೇ ಗ್ಯಾರಂಟಿ. ಇವೆಲ್ಲ ಹೇಳದೇ ಜಾರಿ ಮಾಡಿದ ಗ್ಯಾರಂಟಿಗಳು ಎಂದು ಸರ್ಕಾರಕ್ಕೆ ಟಾಂಗ್ ಕೊಟ್ಟಿದ್ದಾರೆ.