ಉಡುಪಿ:– ಡಿಕೆಶಿ ಅವರ ರಾಜಕೀಯ ಹಿನ್ನೆಡೆಗೆ ಸಿದ್ದರಾಮಯ್ಯ ಕಾರಣ ಎಂದು ಮಾಜಿ ಸಚಿವ ಆರ್ ಅಶೋಕ್ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ಡಿಕೆಶಿ ಅವರನ್ನು ನಿಯಂತ್ರಣದಲ್ಲಿರಿಸುವ ಬಗ್ಗೆ ಶುಕ್ರವಾರ ದಲಿತ ಮುಖಂಡರೆಲ್ಲ ಒಟ್ಟಾಗಿ ಸಭೆ ನಡೆಸಿದ್ದಾರೆ. ಮುಂದೆ ಡಿಕೆಶಿಗೆ ರಾಜಕೀಯ ಹಿನ್ನಡೆಯಾದರೆ ಸಿದ್ದರಾಮಯ್ಯ ಹಾಗೂ ಅವರ ಬೆಂಬಲಿಗರು ನೇರ ಕಾರಣ ಎಂದರು.
ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ತಲಾ ಎರಡೂವರೆ ವರ್ಷ ಮುಖ್ಯಮಂತ್ರಿಯಾಗಬೇಕು ಎಂಬ ಒಪ್ಪಂದವಾಗಿದ್ದರೂ ನಾನೇ ಐದು ವರ್ಷ ಮುಖ್ಯಮಂತ್ರಿ ಎಂದು ಸಿದ್ದರಾಮಯ್ಯ ಹೇಳುತ್ತಿದ್ದಾರೆ. ಇಬ್ಬರ ಪರವಾಗಿ ಕೆಲವು ಶಾಸಕರು, ಸ್ವಾಮೀಜಿಗಳು ಬ್ಯಾಟಿಂಗ್ ಮಾಡುತ್ತಿರುವುದು ಕಾಂಗ್ರೆಸ್ನ ಬಣ ರಾಜಕೀಯಕ್ಕೆ ಸಾಕ್ಷಿಯಾಗಿದೆ. ಡಿಕೆಶಿಗೆ ನಿಜವಾಗಿಯೂ ಕಂಟಕ ಇರುವುದು ಬಿಜೆಪಿಯಿಂದಲ್ಲ; ಸಿದ್ದರಾಮಯ್ಯ ಅವರಿಂದ ಎಂದರು.
ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮಮಂದಿರದ ಬಗ್ಗೆ ದ್ವೇಷ ಕಾರುತ್ತಿರುವ ಕಾಂಗ್ರೆಸ್ ಹಿಂದೂಗಳ ವಿರುದ್ಧ ದಮನಕಾರಿ ಅಸ್ತ್ರಗಳನ್ನು ಪ್ರಯೋಗಿಸುತ್ತಿದೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಅಲ್ಪಸಂಖ್ಯಾತರ ಮತಗಳ ಕ್ರೂಢೀಕರಣ ದೃಷ್ಟಿಯಿಂದ ಒಂದು ವರ್ಗದ ತುಷ್ಟೀಕರಣಕ್ಕೆ ನಿಂತಿದೆ.
ಕರಸೇವೆಯಲ್ಲಿ ಬಾಗವಹಿಸಿದ್ದ ಅಮಾಯಕ ಆಟೋ ಚಾಲಕನ ವಿರುದ್ಧ 16 ಪ್ರಕರಣಗಳಿವೆ ಎಂದು ಮುಖ್ಯಮಂತ್ರಿ ಟ್ವೀಟ್ ಮಾಡಿರುವುದು ನಾಚಿಕೆಗೇಡಿನ ವಿಚಾರ. ಆರೋಪಿ ವಿರುದ್ಧದ ಎಲ್ಲ ಪ್ರಕರಣಗಳು ಇತ್ಯರ್ಥಗೊಂಡಿದ್ದರೂ ಕಾಂಗ್ರೆಸ್ ನಾಯಕರು ರಾಹುಲ್ ಗಾಂಧಿ ಹಾಗೂ ಸೋನಿಯಾ ಅವರನ್ನು ಮೆಚ್ಚಿಸಲು ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಇದಕ್ಕೆ ಪ್ರತಿಯಾಗಿ ಬಿಜೆಪಿ ‘ನಾನೂ ಕರಸೇವಕ ನನ್ನನ್ನೂ ಬಂಧಿಸಿ’ ಅಭಿಯಾನ ನಡೆಸುತ್ತಿದೆ ಎಂದರು.