ಮೈಸೂರು: ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯನವರಿಗೆ ಲೋಕಾಯುಕ್ತ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ. ನವೆಂಬರ್ 6 ಬುಧವಾರ 10:30ಕ್ಕೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಲಾಗಿದೆ. ಈಗಾಗಲೇ ಪತ್ನಿ ಪಾರ್ವತಿ ಅವರನ್ನು ಲೋಕಾಯುಕ್ತ ಪೊಲೀಸರು ವಿಚಾರಣೆ ನಡೆಸಿದ್ದರು.
ಸಿದ್ದರಾಮಯ್ಯನವರ 40 ವರ್ಷದ ಇತಿಹಾಸದಲ್ಲಿ ಇಲ್ಲಿಯವರೆಗೆ ತನ್ನ ವೈಯಕ್ತಿಕ ವಿಚಾರಕ್ಕೆ ಸಂಬಂಧಿಸಿದಂತೆ ಪೊಲೀಸ್ ಆಗಲಿ ಇತರ ವಿಚಾರಣಾ ಸಂಸ್ಥೆಯಿಂದ ನೋಟಿಸ್ ಸ್ವೀಕರಿಸಿರಲಿಲ್ಲ. ಆದರೆ ಈಗ ಮುಡಾ ಅಕ್ರಮಕ್ಕೆ ಸಂಬಂಧಿಸಿದಂತೆ ನೋಟಿಸ್ ಸ್ವೀಕರಿಸಿದ್ದಾರೆ.
ನೀವು ರಾತ್ರಿ ಕಡಿಮೆ ನಿದ್ದೆ ಮಾಡ್ತೀರಾ? ಹಾಗಿದ್ರೆ ಈ ಖಾಯಿಲೆಗಳು ಬರ್ಬೋದು ಹುಷಾರ್..!
ಇನ್ನೂ ನವೆಂಬರ್ 6ರಂದು ಲೋಕಾಯುಕ್ತ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗುವುದಾಗಿ ಸಿಎಂ ಸಿದ್ದರಾಮಯ್ಯ ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಆದಾಗ್ಯೂ, ಅವರು ವಿಚಾರಣೆಗೆ ಹಾಜರಾಗುವ ಬಗ್ಗೆ ಅನುಮಾನಗಳು ವ್ಯಕ್ತವಾಗಿವೆ.
ಸಿದ್ದರಾಮಯ್ಯ ವಿಚಾರಣೆಗೆ ಹಾಜರಾಗುತ್ತಾರೋ ಇಲ್ಲವೋ ಎಂಬ ಅನುಮಾನ ಬಲವಾಗಲು ಕಾರಣ, ನವೆಂಬರ್ 6ರಂದು ಮುಖ್ಯಮಂತ್ರಿಗಳ ದಿನಚರಿ. ಸೋಮವಾರ ರಾತ್ರಿ ಮುಖ್ಯಮಂತ್ರಿಗಳ ಅಧಿಕೃತ ವಾಟ್ಸ್ಆ್ಯಪ್ ಗ್ರೂಪ್ನಲ್ಲಿ ನವೆಂಬರ್ 6ರ ಅವರ ದಿನದ ಕಾರ್ಯಕ್ರಮಗಳ ವೇಳಾಪಟ್ಟಿ ಬಿಡುಗಡೆಯಾಗಿದೆ.
ಮೊದಲ ಬಾರಿ ತನಿಖೆ ಎದುರಿಸುತ್ತಿರುವ ಸಿದ್ದರಾಮಯ್ಯ
ಸಿದ್ದರಾಮಯ್ಯ ಶಾಸಕರಾಗಿ, ಸಚಿವರಾಗಿ, ಡಿಸಿಎಂ ಆಗಿ, ಎರಡು ಬಾರಿ ಮುಖ್ಯಮಂತ್ರಿ ಆದವರು. ಸುದೀರ್ಘ 40 ವರ್ಷದ ರಾಜಕೀಯ ಜೀವನದಲ್ಲಿ ಒಂದೇ ಒಂದು ಕಳಂಕ ಅಂಟಿಸಿಕೊಂಡಿರಲಿಲ್ಲ. ಯಾವುದೇ ವಿಚಾರಣೆಯನ್ನೂ ಎದುರಿಸಿರಲಿಲ್ಲ. ಇದೀಗ ಮುಡಾ ಸೈಟ್ ವಿಚಾರದಲ್ಲಿ ವಿಚಾರಣೆ ಎದುರಿಸಲಿದ್ದಾರೆ. ಮೊದಲ ಬಾರಿ ತನಿಖಾ ಸಂಸ್ಥೆ ಮುಂದೆ ವಿಚಾರಣೆಗೆ ಹಾಜರಾಗಬೇಕಿದೆ.
ನವೆಂಬರ್ 6ರಂದು ಸಿದ್ದರಾಮಯ್ಯ ಕಾರ್ಯಕ್ರಮಗಳೇನು?
ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕೃತ ವೇಳಾಪಟ್ಟಿ ಪ್ರಕಾರ ನವೆಂಬರ್ 6ರಂದು ಬೆಳಗ್ಗೆ 10 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಚನ್ನಪಟ್ಟಣ ಉಪಚುನಾವಣೆ ಪ್ರಚಾರ ಸಂಬಂಧಿ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಚನ್ನಪಟ್ಟಣ ಉಪಚುನಾವಣೆಗೆ ಪಕ್ಷದ ಅಭ್ಯರ್ಥಿಯಾಗಿರುವ ಸಿಪಿ ಯೋಗೇಶ್ವರ್ ಪರ ಪ್ರಚಾರ ನಡೆಸಲಿದ್ದಾರೆ. ವಿವಿಧ ಗ್ರಾಮಗಳಲ್ಲಿ ನಡೆಯಲಿರುವ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಹೀಗಾಗಿ ಸಿಎಂ ಲೋಕಾಯುಕ್ತ ವಿಚಾರಣೆಗೆ ಹಾಜರಾಗಲಿದ್ದಾರೆಯೇ ಎಂಬ ಅನುಮಾನ ಮೂಡಿದೆ.