ಶಿವಮೊಗ್ಗ: ತೆರಿಗೆ ಪಾಲು ಹಾಗೂ ಅನುದಾನ ಕಡಿತ ವಿಚಾರವಾಗಿ ದೆಹಲಿಯಲ್ಲಿ ಪ್ರತಿಭಟನೆ ನಡೆಸುವ ಮೂಲಕ ಕಾಂಗ್ರೆಸ್ ಹಾಗೂ ಸಿದ್ದರಾಮಯ್ಯ ಅವರು ಕರ್ನಾಟಕದ ಮಾನವನ್ನು ಹರಾಜು ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಕಿಡಿಕಾರಿದರು.
ನಗರದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ಕೇಂದ್ರದಿಂದ ಅನುದಾನ ವಿಚಾರವಾಗಿ ತಾರತಮ್ಯ ಮಾಡಲಾಗಿದೆ ಎಂದು ಆರೋಪ ಮಾಡುತ್ತಿರುವ ಸಿಎಂ ಸಿದ್ದರಾಮಯ್ಯ ಅವರು, ಲೋಕಸಭೆ ಚುನಾವಣೆ ವರೆಗೂ ಶ್ವೇತಪತ್ರ ಹೊರಡಿಸಲ್ಲ ಎಂದರು.
ಯುಪಿಎ ಅವಧಿ ಮತ್ತು ಎನ್ಡಿಎ ಅವಧಿಯಲ್ಲಿ ಕರ್ನಾಟಕಕ್ಕೆ ಎಷ್ಟೆಷ್ಟು ಅನುದಾನ ಬಂತು ಎಂಬುವುದರ ಬಗ್ಗೆ ಶ್ವೇತಪತ್ರ ಹೊರಡಿಲಿ. ಅದರ ಬದಲಾಗಿ,ದೆಹಲಿಯಲ್ಲಿ ಪ್ರತಿಭಟನೆಗೆ ಹೋಗುವ ಮೂಲಕ ಕರ್ನಾಟಕದ ಮಾನವನ್ನು ಸಿದ್ದರಾಮಯ್ಯ ಹರಾಜು ಮಾಡ್ತಿದ್ದಾರೆ ಎಂದು ಕಿಡಿಕಾರಿದರು.
ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರು ಸುಳ್ಳುಗಳನ್ನು ಹೇಳುವ ಮೂಲಕ ರಾಜ್ಯದ ಜನರ ದಾರಿ ತಪ್ಪಿಸುತ್ತಿದ್ದಾರೆ. ಆದರೆ ರಾಜ್ಯ ಸರ್ಕಾರದ ಬರಗಾಲ ಪೀಡಿತ ತಾಲ್ಲೂಕುಗಳಿಗೆ ಎಷ್ಟು ಕೊಟ್ಟಿದ್ದಾರೆ? ಬೆಳೆ ಪರಿಹಾರಕ್ಕೆ ಯಾವ ಜಿಲ್ಲೆಗೆ ಎಷ್ಟು ಕೊಟ್ರು ಅಂತ ಹೇಳಲಿ ಎಂದು ಸವಾಲು ಹಾಕಿದರು.