ಬೆಂಗಳೂರು:– ಸಿದ್ದರಾಮಯ್ಯರೇ ಕಾಂತರಾಜು ವರದಿಯನ್ನು ಸ್ವೀಕರಿಸಲಿ ಎಂದು ಮಾಜಿ ಸಿಎಯ ಯ ಎಚ್ ಡಿ ಕುಮಾರಸ್ವಾಮಿ ಸವಾಲು ಹಾಕಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,2018ರಲ್ಲಿ ಕಾಂತರಾಜು ವರದಿ ಸ್ವೀಕಾರ ಮಾಡಲು ಕುಮಾರಸ್ವಾಮಿ ಒಪ್ಪಿಲ್ಲ ಎಂದು ನೀವು ಆರೋಪ, ಆಪಾದನೆ ಮಾಡುತ್ತಿದ್ದೀರಿ. ಈಗ ನಿಮ್ಮ ಸರಕಾರ ಬಂದು 6 ತಿಂಗಳಾಗಿದೆ. ನೀವು ಯಾಕೆ ವರದಿ ಸ್ವೀಕಾರ ಮಾಡಿಲ್ಲ? ಎಂದು ಸಿದ್ದರಾಮಯ್ಯ ಅವರನ್ನೇ ಪ್ರಶ್ನಿಸಿದರು.
ಜನರಿಗೆ ಒಳ್ಳೆಯದು ಮಾಡಬೇಕು ಎನ್ನುವುದಕ್ಕಿಂತ ತಮ್ಮ ಶಕ್ತಿ ಹೆಚ್ಚಿಸಿಕೊಳ್ಳಬೇಕು, ಸಮಾಜದಲ್ಲಿ ಸಂಘರ್ಷ ಸೃಷ್ಟಿ ಮಾಡಲು ವೇದಿಕೆ ಮಾಡಲು ಹೊರಟಿದ್ದಾರೆ. ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎಂದು ಹಾದಿ ಬೀದಿಯಲ್ಲಿ ಹೇಳಿಕೊಂಡು ತಿರುಗುತ್ತಿದ್ದಾರೆ. ಆದರೆ ಗುರುವಾರದ ಕ್ಯಾಬಿನೆಟ್ನಲ್ಲಿ ಮಾಡಿದ ತೀರ್ಮಾನಕ್ಕೆ ಇದೇ ಅರ್ಥವೇ ಎಂದು ಸಿದ್ದರಾಮಯ್ಯರನ್ನು ಕುಮಾರಸ್ವಾಮಿ ಪ್ರಶ್ನಿಸಿದರು.
ಕಾಂತರಾಜು ವರದಿಯ ಮೂಲ ಪ್ರತಿ ಕಳ್ಳತನವಾಗಿರುವುದು ಗೊತ್ತಿಲ್ಲ ಎಂದು ಗೃಹ ಸಚಿವರು ಹೇಳುತ್ತಿದ್ದಾರೆ. ಅವರಲ್ಲೇ ದ್ವಂದ್ವವಿದೆ. ಜಾತಿಗಣತಿಯನ್ನು ಮನೆಗಳಿಗೆ ಹೋಗಿ ಮಾಡಿಲ್ಲ, ವಿದ್ಯಾರ್ಥಿಗಳಿಂದ ಮಾಡಿಸಿದ್ದಾರೆ ಎಂಬ ಆರೋಪವಿದೆ. ಕಾಂತರಾಜು ವರದಿ ಸಿದ್ಧವಾಗಿ 9 ವರ್ಷಗಳಾಗಿವೆ. ಇಷ್ಟು ವರ್ಷಗಳಲ್ಲಿ ಸಾಕಷ್ಟು ಬದಲಾವಣೆಗಳು ಆಗಿವೆ. ಅದನ್ನು ಆಧಾರವಾಗಿ ಇಟ್ಟುಕೊಂಡು ಯಾರಿಗೆ ನ್ಯಾಯ ಕೊಡಲು ಸಾಧ್ಯ ಎಂದು ಪ್ರಶ್ನಿಸಿದರು.