ಬೆಂಗಳೂರು:-ಸಚಿವ ಹೆಚ್ಡಿ ಕುಮಾರಸ್ವಾಮಿ ಹಾಗೂ ರಾಜ್ಯ ಕಾಂಗ್ರೆಸ್ ನಾಯಕರ ನಡುವಿನ 60 ಪರ್ಸೆಂಟ್ ಕಮಿಷನ್ ಆರೋಪ –ಪ್ರತ್ಯಾರೋಪ ಜೋರಾಗಿದೆ. ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಹೆಚ್ಡಿ ಕುಮಾರಸ್ವಾಮಿ 60% ಕಮಿಷನ್ ಆರೋಪ ಮಾಡಿದ್ದರು. ಸುಮ್ಮನೆ ಆರೋಪ ಮಾಡುವುದಲ್ಲ, ದಾಖಲೆ ಕೊಡಿ ಅಂತ ಸಿಎಂ ಸೇರಿದಂತೆ ಕಾಂಗ್ರೆಸ್ ನಾಯಕರು ಸವಾಲು ಹಾಕಿದ್ದರು.
ಇದೀಗ 60% ಕಮಿಷನ್ ಆರೋಪಕ್ಕೆ ಗುತ್ತಿಗೆದಾರರ ಬಾಕಿ ಹಣದ ಪಟ್ಟಿಯನ್ನು ಮಾಜಿ ಸಿಎಂ HD ಕುಮಾರಸ್ವಾಮಿ ಅವರು, ರಿಲೀಸ್ ಮಾಡಿದರು.
60% ಕಮಿಷನ್ಗೆ ದಾಖಲೆ ಕೊಡಿ ಎಂದಿದ್ದ ಸಿಎಂ ಸಿದ್ದರಾಮಯ್ಯ ಮತ್ತು ಸಚಿವರಿಗೆ ತಿರುಗೇಟು ಕೊಟ್ಟಿರುವ ಕುಮಾರಸ್ವಾಮಿ, ಯಾವ ಯಾವ ಇಲಾಖೆಯಲ್ಲಿ ಗುತ್ತಿಗೆದಾರರಿಗೆ ಹಣ ಬಾಕಿ ಇದೆ ಎಂದು ಅಂಕಿಅಂಶಗಳನ್ನು ಬಿಡುಗಡೆ ಮಾಡಿದ್ದಾರೆ.
ದಾಖಲೆ ಕೊಡಿ, ದಾಖಲೆ ಕೊಡಿ ಎನ್ನುತ್ತಿದ್ದೀರಿ ಇಲ್ನೋಡಿ ಸನ್ಮಾನ್ಯ ಸಿದ್ದರಾಮಯ್ಯನವರೇ ನಿಮ್ಮ ಖೊಟ್ಟಿ ಗ್ಯಾರಂಟಿ ಸರ್ಕಾರದ ಲೂಟಿ ಸಾಕ್ಷಿಗುಡ್ಡೆ. ನಿಮ್ಮ ಸರ್ಕಾರ ಗುತ್ತಿಗೆದಾರರನ್ನು ಎಷ್ಟು ನಿರ್ಲಜ್ಜವಾಗಿ ಸುಲಿಗೆ ಮಾಡುತ್ತಿದೆ ಎನ್ನುವುದಕ್ಕೆ ಈ ಸಾಕ್ಷಿಗುಡ್ಡೆ ಸಾಕ್ಷ್ಯ ಸಾಲದೇ ಮುಖ್ಯಮಂತ್ರಿಗಳೇ? ಎಂದು ಸಚಿವರು ಪ್ರಶ್ನೆ ಮಾಡಿದ್ದಾರೆ. ಚೆಂಬು ಹಾಕಿ ಹಂಡೆ ಹೊಡೆದರು ಎನ್ನುವಂತೆ ಗ್ಯಾರಂಟಿ ಹೆಸರಿನಲ್ಲಿ ಬಿಡಿಗಾಸು ಕೊಟ್ಟು ಕೋಟಿ ಕೋಟಿ ಲೂಟಿ ಮಾಡುತ್ತಿದ್ದೀರಿ.
ಗುತ್ತಿಗೆದಾರರ ಬಿಲ್ ಬಾಕಿ ಪಟ್ಟಿ ನೋಡಿ.
ಜಲ ಸಂಪನ್ಮೂಲ- 14,600 ಕೋಟಿ ರೂ.
ಲೋಕೋಪಯೋಗಿ- 10,000 ಕೋಟಿ ರೂ.
ಗ್ರಾಮೀಣಾಭಿವೃದ್ಧಿ & ಪಂಚಾಯತ್ ರಾಜ್- 3,100 ಕೋಟಿ ರೂ.
ಸಣ್ಣ ನೀರಾವರಿ- 2,800 ಕೋಟಿ ರೂ.
ಇತರೆ ಇಲಾಖೆ- 1,500 ಕೋಟಿ ರೂ.
ಒಟ್ಟು- 32,000 ಕೋಟಿ ರೂ. ಬಾಕಿ ಇದೆ ಅಂತ ಕಿಡಿಕಾರಿದ್ದಾರೆ.
ಭಂಡತನ ಏಕೆ? ಆಗಿರುವ ತಪ್ಪು ಸರಿಪಡಿಸಿಕೊಳ್ಳಿ. ವಿನಾಕಾರಣ ಸಮರ್ಥನೆ ಲಾಯಕ್ಕಲ್ಲ. ಗುತ್ತಿಗೆದಾರರ ಬದುಕು ಉಳಿಸಿ ರಾಜ್ಯದ ಅಭಿವೃದ್ಧಿ ಕಡೆಗೆ ಗಮನ ಹರಿಸಿ. ಇದ್ದಿದ್ದನ್ನು ಇದ್ದಹಾಗೆ ಹೇಳಿದ್ದೇನೆ. ನೀವೂ, ನಿಮ್ಮ ಸಂಪುಟ ನನ್ನ ಮೇಲೆ ವಾಗ್ಯುದ್ಧಕ್ಕಿಳಿದರೆ ಉಪಯೋಗವೇನು? ಗುತ್ತಿಗೆದಾರರ ಬಾಕಿ ಪಾವತಿಗಿಂತ ನನ್ನನ್ನು ಟಾರ್ಗೆಟ್ ಮಾಡುವುದು ಮುಖ್ಯವಲ್ಲ ಎಂದು ಸಿಎಂ ಮತ್ತು ಸಚಿವರಿಗೆ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ