ಬಾಲಿವುಡ್ ಚಿತ್ರರಂಗದ ಅನೇಕ ಕಲಾವಿದರು ಹಾಲಿವುಡ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಈಗಾಗ್ಲೆ ಐಶ್ವರ್ಯಾ ರೈ ಬಚ್ಚನ್, ಇರ್ಫಾನ್ ಖಾನ್ ಸೇರಿದಂತೆ ಹಲವರು ಇಂಗ್ಲಿಷ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ ನಟಿ ಶ್ರುತಿ ಹಾಸನ್ ಹಾಲಿವುಡ್ ಸಿನಿಮಾವನ್ನ ರಿಜೆಕ್ಟ್ ಮಾಡಿದ್ದಾರೆ.
ಕೆಲವು ದಿನಗಳ ಹಿಂದೆ ನಟಿ ಶ್ರುತಿ ಹಾಸನ್ ಹಾಲಿವುಡ್ನ ಒಂದು ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಎಂದು ಸುದ್ದಿ ಹೊರಬಿದ್ದಿತ್ತು. ಆದರೆ ಆ ಚಿತ್ರದಿಂದ ಶ್ರುತಿ ಹಾಸನ್ ಹೊರಬಂದಿದ್ದಾರೆ ಎಂದು ಹೇಳಲಾಗುತ್ತಿದೆ. ಇದಕ್ಕೂ ಮುನ್ನ, ಸಮಂತಾ ರುತ್ ಪ್ರಭು ಕೂಡ ಇದೇ ಸಿನಿಮಾದಿಂದ ಹೊರಬಂದಿದ್ದರು.
ಹಾಲಿವುಡ್ ನಿರ್ದೇಶಕ ಫಿಲಿಪ್ ಜಾನ್ ಅವರು ‘ಚೆನ್ನೈ ಸ್ಟೋರಿ’ ಸಿನಿಮಾಗೆ ನಿರ್ದೇಶನ ಮಾಡುತ್ತಿದ್ದಾರೆ. ‘ಅರೇಂಜ್ಮೆಂಟ್ಸ್ ಆಫ್ ಲವ್’ ಕಾದಂಬರಿಯನ್ನು ಆಧರಿಸಿ ಈ ಸಿನಿಮಾ ಮೂಡಿಬರುತ್ತಿದೆ. ಹಾಲಿವುಡ್ನ ಈ ಸಿನಿಮಾಗೆ ನಾಯಕಿಯಾಗಿ ಮೊದಲು ಆಯ್ಕೆ ಆಗಿದ್ದು ಸಮಂತಾ ರುತ್ ಪ್ರಭು. ನಿರ್ದೇಶಕರ ಜೊತೆ ಅವರ ಫೋಟೋ ಕೂಡ ವೈರಲ್ ಆಗಿತ್ತು. ಆದರೆ ಆ ಪ್ರಾಜೆಕ್ಟ್ನಿಂದ ಸಮಂತಾ ಆಚೆ ಬಂದ ಬಳಿಕ ಆ ಜಾಗಕ್ಕೆ ಶ್ರುತಿ ಹಾಸನ್ ಆಯ್ಕೆ ಆಗಿದ್ದರು.
ಶ್ರುತಿ ಹಾಸನ್ ಅವರು ‘ಚೆನ್ನೈ ಸ್ಟೋರಿ’ ಸಿನಿಮಾಗೆ ಚಿತ್ರೀಕರಣ ಕೂಡ ಪ್ರಾರಂಭಿಸಿದ್ದರು. ಮೂಲಗಳ ಪ್ರಕಾರ, ಈ ಸಿನಿಮಾದಿಂದ ಶ್ರುತಿ ಹಾಸನ್ ಹೊರಬಂದಿದ್ದಾರೆ. ಆದರೆ ಅವರ ಈ ನಿರ್ಧಾರಕ್ಕೆ ಕಾರಣ ಏನು ಎಂಬುದು ಬಹಿರಂಗ ಆಗಿಲ್ಲ.
2023ರಲ್ಲಿ ಶ್ರುತಿ ಹಾಸನ್ ಅವರಿಗೆ ‘ಸಲಾರ್’ ಸಿನಿಮಾದಿಂದ ದೊಡ್ಡ ಗೆಲುವು ಸಿಕ್ಕಿತು. ದಕ್ಷಿಣ ಭಾರತದಲ್ಲಿ ಮಾತ್ರವಲ್ಲದೇ ಬಾಲಿವುಡ್ ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ಕಳೆದ ವರ್ಷ ಇಂಗ್ಲಿಷ್ನ ‘ದಿ ಐ’ ಸಿನಿಮಾದಲ್ಲಿ ಅವರು ನಟಿಸಿದ್ದರು. ಆ ಬಳಿಕ ಅವರು ಒಪ್ಪಿಕೊಂಡ ಎರಡನೇ ಹಾಲಿವುಡ್ ಸಿನಿಮಾ ‘ಚೆನ್ನೈ ಸ್ಟೋರಿ’. ಆದರೆ ಆ ಪ್ರಾಜೆಕ್ಟ್ಗೆ ಅವರು ಗುಡ್ ಬೈ ಹೇಳಿದ್ದಾರೆ ಎಂದು ಸುದ್ದಿ ಹಬ್ಬಿದೆ. ಈ ಬಗ್ಗೆ ಶ್ರುತಿ ಹಾಸನ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.