ಹಾಸನ:- ನಾನು ಮುಂದೆ ಮಂತ್ರಿ ಆಗಬೇಕಾದರೆ ಶ್ರೇಯಸ್ ಪಟೇಲ್ ಗೆಲ್ಲಿಸಿ ಎಂದು ಹಾಸನ ಜನತೆಗೆ ಕೆಎಂ ಶಿವಲಿಂಗೇಗೌಡ ಸಲಹೆ ಕೊಟ್ಟಿದ್ದಾರೆ.
ಪಕ್ಷದ ಅಭ್ಯರ್ಥಿ ಶ್ರೇಯಸ್ ಪಟೇಲ್ ಪರ ಪ್ರಚಾರ ಮಾಡುವುದರ ಜೊತೆಗೆ ತಮ್ಮನ್ನ ಮಂತ್ರಿ ಮಾಡಬೇಕೆನ್ನುವ ಆಗ್ರಹವನ್ನು ಬಹಳ ಚಾಕ್ಯಚಕ್ಯತೆಯಿಂದ ಮಾಡಿದರು. ಮಾತು ಆರಂಭಿಸಿದ ಬಳಿಕ ಬರಪರಿಹಾರ ನಿಧಿ ಮಾಡದಿರುವುದಕ್ಕೆ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದದ ಗೌಡರು, ನಂತರ ತಾವು ಮಂತ್ರಿಯಾಗುವ ಇಂಗಿತವನ್ನು ಗಟ್ಟಿಧ್ವನಿಯಲ್ಲಿ ಹೇಳಿದರು. ಜೆಡಿಎಸ್ ಬಿಟ್ಟು ಕಾಂಗ್ರೆಸ್ ಸೇರಿಯೂ ತಾನು ಅಸೆಂಬ್ಲಿ ಚುನಾವಣೆಯಲ್ಲಿ ಗೆದ್ದಿರುವುದಾಗಿ ಹೇಳಿದ ಅವರು ಗೆದ್ದ ಬಳಿಕ ತನ್ನನ್ನು ಮಂತ್ರಿ ಮಾಡಬೇಕಿತ್ತು, ಆದರೆ ಅದ್ಯಾವುದೋ ಕಾರಣಕ್ಕೆ ಸಚಿವ ಸ್ಥಾನ ನೀಡದೆ ಹೌಸಿಂಗ್ ಬೋರ್ಡ್ ಅಧ್ಯಕ್ಷನ ಸ್ಥಾನ ನೀಡಿದರು ಎಂದರು.
ಆದರೆ ಅದನ್ನು ತಾನು ತಿರಸ್ಕರಿಸುವುದಾಗಿ ಹೇಳಿದ ಗೌಡರು ತನ್ನನ್ನು ಮಂತ್ರಿ ಸ್ಥಾನಕ್ಕೆ ಪರಿಗಣಿಸಬೇಕಾದರೆ ಶ್ರೇಯಸ್ ಪಟೇಲ್ ರನ್ನು ಪ್ರಚಂಡ ಬಹಮತದಿಂದ ಗೆಲ್ಲಿಸಬೇಕು, ಗೆಲ್ಲಿಸಿದರೆ ತಾನು ಖಂಡಿತ ಮಂತ್ರಿ ಆಗುವೆ ಎಂದರು.